ಮನೆ ಸುದ್ದಿ ಜಾಲ ಕರ್ನಾಟಕ ಸೇನಾ ಪಡೆ ವತಿಯಿಂದ  67ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕರ್ನಾಟಕ ಸೇನಾ ಪಡೆ ವತಿಯಿಂದ  67ನೇ ಕನ್ನಡ ರಾಜ್ಯೋತ್ಸವ ಆಚರಣೆ

0

ಮೈಸೂರು(Mysuru): ಕರ್ನಾಟಕ ಸೇನಾ ಪಡೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವನ್ನು ಅಗ್ರಹಾರ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಆಚರಿಸಲಾಯಿತು.

ಸಂಸದ ಪ್ರತಾಪ್ ಸಿಂಹ  ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿ, ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಬಹಳ ಉತ್ಸಾಹದಿಂದ, ಅಭಿಮಾನದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದಾರೆ. ಕರ್ನಾಟಕ ಸೇನಾ ಪಡೆ ಇದೇ ರೀತಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ  ಕೆಲಸಗಳನ್ನು ಮಾಡುತ್ತಾ ಮುಂದುವರಿಯಲಿ ಎಂದು ಹೇಳಿದರು.

ಈ ವರ್ಷದ ಕನ್ನಡ ರಾಜ್ಯೋತ್ಸವದ ಇನ್ನೊಂದು ವಿಶೇಷವೆಂದರೆ ಪುನೀತ್ ರಾಜಕುಮಾರ್ ಅವರಿಗೆ ಇಂದು ಸರ್ಕಾರದ ವತಿಯಿಂದ  ” ಕರ್ನಾಟಕ ರತ್ನ ”  ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನಗಲಿದರು. ತಮ್ಮ ೪೦ ವರ್ಷಗಳ ಸಿನಿ ಪಯಣದಲ್ಲಿ ಅವರ ಕೊಡುಗೆ ಅಪಾರ. ಕನ್ನಡ ನಾಡಿಗೆ ಅಪಾರ ಜನಸೇವೆಯನ್ನು ಮಾಡಿದ್ದಾರೆ. ಒಂದು ಕಡೆ ನಮಗೆ ಅವರಿಲ್ಲದಿರುವುದು ನೋವಾದರೆ,  ಇನ್ನೊಂದು ಕಡೆ ನಾವು ಅವರ ಜೀವನವನ್ನು ಉತ್ಸಾಹದ ದಿಕ್ಕಿನಲ್ಲಿ ನೋಡಬೇಕು. ಜತೆಗೆ ಸರ್ಕಾರ ಅವರ ಹುಟ್ಟುಹಬ್ಬವನ್ನು “ಸ್ಪೂರ್ತಿಯ ದಿನ “ವನ್ನಾಗಿ  ಆಚರಣೆ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭ ನೆರೆದಿದ್ದವರಿಗೆ  ಮನೆ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸುವ ಸಲುವಾಗಿ ವಿಧಾನ ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ ಅವರು ಕನ್ನಡ ಬಾವುಟ ವಿತರಣೆ ಮಾಡಿದರು.

ಡಾ. ಬಿ ಆರ್ ನಟರಾಜ್ ಜೋಯ್ಸ್ ಸಾರ್ವಜನಿಕ ರಿಗೆ ಸಿಹಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ, ಬಿ.ಆರ್ ನಂದೀಶ್ ಕುಮಾರ್, ಗೋಲ್ಡ್ ಸುರೇಶ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಸಿ ಎಚ್ ಕೃಷ್ಣಯ್ಯ(ಕೃಷ್ಣಪ್ಪ ), ಪ್ರಭಾಕರ, ಮೊಗಣ್ಣಾಚಾರ್, ವಿಜಯೇಂದ್ರ, ಕುಮಾರ್, ಅಂಬಾ ಅರಸ್, ಜ್ಯೋತಿ, ಮಹಾದೇವ, ಬಂಗಾರಪ್ಪ, ದರ್ಶನ್ ಗೌಡ, ದಿಲೀಪ್, ಸ್ವಾಮಿ, ಗೊರೂರು ಮಲ್ಲೇಶ್, ರಾಧಾಕೃಷ್ಣ, ಸಿದ್ದರಾಜು, ಗಣೇಶ್ ಪ್ರಸಾದ್, ಗುಂಡ್ಲುಪೇಟೆ ಸಂತೋಷ್ ಇನ್ನೂ ಇತರರು ಉಪಸ್ಥಿತರಿದ್ದರು.