ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಅತ್ಯಗತ್ಯ ಎಂದು ಪರಿಗಣಿಸಲಾಗಿದೆ. ಬೇಸಿಗೆಯಲ್ಲಿ ಇದು ಉತ್ತಮ ಆಯ್ಕೆ ಎನ್ನುತ್ತೇವೆ. ಆದರೆ, ಚಳಿಗಾಲದಲ್ಲಿ ಸಹ ಇದು ಚರ್ಮದ ಶುಷ್ಕತೆ, ಚರ್ಮದ ತುರಿಕೆ ಮುಂತಾದ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ.
ರೋಸ್ ವಾಟರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕವಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬಂತೆಂದರೆ ನಮ್ಮ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬರುತ್ತವೆ. ಇದು ಚರ್ಮದ ಮೇಲೆ ದದ್ದುಗಳು ಮತ್ತು ಕೆಂಪಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದಕ್ಕೆಲ್ಲ ಪರಿಹಾರ ರೋಸ್ ವಾಟರ್.
ಪ್ರತಿದಿನ ನಿಮ್ಮ ತ್ವಚೆಗೆ ರೋಸ್ ವಾಟರ್ ಹಚ್ಚುವುದರಿಂದ ನಿಮ್ಮ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ, ಇದು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ರೋಸ್ ವಾಟರ್ ಅನ್ನು ಹತ್ತಿ ಪ್ಯಾಡ್’ನಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ಹಚ್ಚಿ ಅಥವಾ ನೇರವಾಗಿ ಟೋನರ್’ನಂತೆ ಸಿಂಪಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಮುಖ ಫ್ರೆಶ್ ಆಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ.
ನಿಮ್ಮ ಮುಖದಲ್ಲಿ ಮೊಡವೆಗಳು ಜಾಸ್ತಿ ಇದ್ದರೆ ಶ್ರೀಗಂಧದ ಪುಡಿ, ನಿಂಬೆರಸ ಮತ್ತು ರೋಸ್ ವಾಟರ್ ಹಾಕಿ ಮಾಸ್ಕ್ ಹಚ್ಚಿ 10 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ.
ಮುಲ್ತಾನಿ ಮಿಟ್ಟಿ ಪುಡಿಯನ್ನು ರೋಸ್ ವಾಟರ್’ನೊಂದಿಗೆ ಬೆರೆಸಿ ಪೇಸ್ಟ್ನಂತೆ ಮುಖಕ್ಕೆ ಹಚ್ಚಿದರೆ ಮೊಡವೆಗಳು ನಿವಾರಣೆಯಾಗುತ್ತದೆ ಮತ್ತು ಚರ್ಮದ ಟೋನ್ ಸುಧಾರಿಸುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಸೌತೆಕಾಯಿ ರಸ, ಮೊಸರು ಮತ್ತು ಶ್ರೀಗಂಧದ ಪುಡಿಯನ್ನು ರೋಸ್ ವಾಟರ್ನೊಂದಿಗೆ ಬೆರೆಸಿ ಪೇಸ್ಟ್ ಮಾಡಿ, ಮುಖಕ್ಕೆ ಮಾಸ್ಕ್ ಅನ್ನು ಹಚ್ಚಿ, 1 ಗಂಟೆ ಬಿಡಿ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕಪ್ಪು ಕಲೆಗಳು ಹೋಗುತ್ತವೆ.
ಹೊಳೆಯುವ ತ್ವಚೆಯನ್ನು ಪಡೆಯಲು ಕಡಲೆ ಹಿಟ್ಟು ಅಥವಾ ಮುಲ್ತಾನಿ ಮಿಟ್ಟಿ ಪುಡಿಯೊಂದಿಗೆ ರೋಸ್ ವಾಟರ್ ಬೆರೆಸಿ ಫೇಸ್ ಮಾಸ್ಕ್ ಹಾಕಿದರೆ ಚರ್ಮದ ಬಣ್ಣ ಹೆಚ್ಚುತ್ತದೆ. ನೀವು ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಮೊಡವೆ ಮುಂತಾದ ಸಮಸ್ಯೆಗಳನ್ನು ಗುಣಪಡಿಸಬಹುದು.
ರೋಸ್ ವಾಟರ್ ತ್ವಚೆಯ ಪಿಹೆಚ್ ಸಮತೋಲನವನ್ನು ಕಾಪಾಡಿ ಹೆಚ್ಚುವರಿ ಎಣ್ಣೆ ಮತ್ತು ಮೇದೋಗ್ರಂಥಿಗಳನ್ನು ನಿಯಂತ್ರಿಸುವ ಮೂಲಕ ಚರ್ಮದ ಸೌಂದರ್ಯವನ್ನು ಕಾಪಾಡುತ್ತದೆ.