ಮನೆ ಕ್ರೀಡೆ ಟಿ20 ವಿಶ್ವಕಪ್ : ಅಫ್ಘಾನಿಸ್ತಾನ ಮಣಿಸಿದ ಶ್ರೀಲಂಕಾ

ಟಿ20 ವಿಶ್ವಕಪ್ : ಅಫ್ಘಾನಿಸ್ತಾನ ಮಣಿಸಿದ ಶ್ರೀಲಂಕಾ

0

ಬ್ರಿಸ್ಬೇನ್‌: ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಹಣಾಹಣಿಯಲ್ಲಿ ಅಫ್ಗಾನಿಸ್ತಾನ ತಂಡವನ್ನು ಶ್ರೀಲಂಕಾ ತಂಡವು ಆರು ವಿಕೆಟ್‌’ಗಳಿಂದ ಮಣಿಸಿದೆ.

ಮಂಗಳವಾರ ಇಲ್ಲಿಯ ಗಾಬಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಲ್‌’ರೌಂಡರ್‌ ವನಿಂದು ಹಸರಂಗ (13ಕ್ಕೆ 3) ಬೌಲಿಂಗ್ ಮತ್ತು ಧನಂಜಯ ಡಿಸಿಲ್ವಾ (ಔಟಾಗದೆ 66) ಅವರ ಉತ್ತಮ ಬ್ಯಾಟಿಂಗ್‌ ಶ್ರೀಲಂಕಾ ತಂಡಕ್ಕೆ ಗೆಲುವು ತಂದುಕೊಟ್ಟವು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೊಹಮ್ಮದ್ ನಬಿ ನಾಯಕತ್ವದ ಅಫ್ಗನ್‌ ತಂಡವನ್ನು ಶ್ರೀಲಂಕಾ 8 ವಿಕೆಟ್‌ಗೆ 144 ರನ್‌ಗಳಿಗೆ ನಿಯಂತ್ರಿಸಿತು. 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ದಸುನ್ ಶನಕ ಬಳಗ ಈ ಗುರಿ ತಲುಪಿತು.

ಉತ್ತಮ ಆರಂಭ: ಅಫ್ಗಾನಿಸ್ತಾನ ಪರ ಬ್ಯಾಟಿಂಗ್ ಆರಂಭಿಸಿದ ರೆಹಮಾನುಲ್ಲಾ ಗುರ್ಬಾಜ್‌ (28) ಮತ್ತು ಉಸ್ಮಾನ್ ಘನಿ (27) ಮೊದಲ ವಿಕೆಟ್ ಜೊತೆಯಾಟದಲ್ಲಿ 42 ರನ್ ಪೇರಿಸಿದರು.

ಲಹಿರು ಕುಮಾರ (30ಕ್ಕೆ 2) ಈ ಜೊತೆಯಾಟ ಮುರಿದರು. ಬಳಿಕ ಉಸ್ಮಾನ್‌ ಜೊತೆಗೂಡಿದ ಇಬ್ರಾಹಿಂ ಜದ್ರಾನ್‌ (22) ತಂಡವನ್ನು ಆಧರಿಸಿದರು. ಆದರೆ ಬಳಿಕ ಶ್ರೀಲಂಕಾ ಬೌಲರ್‌ಗಳು ಹೆಚ್ಚು ನಿಯಂತ್ರಣ ಸಾಧಿಸಿದರು. ನಜೀಬುಲ್ಲಾ ಜದ್ರಾನ್‌ (18) ಅವರಿಂದ ಮಾತ್ರ ಒಂದಷ್ಟು ಪ್ರತಿರೋಧ ಸಾಧ್ಯವಾಯಿತು. ಸಾಧಾರಣ ಗುರಿ ಬೆನ್ನತ್ತಿದ ಲಂಕಾದ ಆರಂಭ ಉತ್ತಮವಾಗಿರಲಿಲ್ಲ.ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಪಥುಮ್ ನಿಸ್ಸಂಕಾ (10) ವಿಕೆಟ್‌ ಕಬಳಿಸಿದ ಮುಜೀಬುರ್ ರೆಹಮಾನ್ (24ಕ್ಕೆ 2) ಅಫ್ಗನ್ ತಂಡಕ್ಕೆ ಮೇಲುಗೈ ಒದಗಿಸಿದರು.

ಬಳಿಕ ಕುಶಾಲ್ ಮೆಂಡಿಸ್‌ (25) ಮತ್ತು ಧನಂಜಯ ಜವಾಬ್ದಾರಿಯುತ ಆಟವಾಡಿ ಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 42 ಎಸೆತಗಳನ್ನು ಎದುರಿಸಿದ ಧನಂಜಯ ಆರು ಬೌಂಡರಿ ಎರಡು ಸಿಕ್ಸರ್ ಸಿಡಿಸಿದರು. ಈ ಜಯದೊಂದಿಗೆ ಲಂಕಾ ಒಂದನೇ ಗುಂಪಿನಲ್ಲಿ ಮೂರನೇ ಸ್ಥಾನಕ್ಕೇರಿತು. ಆದರೆ ಅಫ್ಗಾನಿಸ್ತಾನ ಸೆಮಿಫೈನಲ್ ಆಸೆ ಕೈಬಿಡಬೇಕಾಯಿತು.

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 (ರಹಮಾನುಲ್ಲಾ ಗುರ್ಬಾಜ್‌ 28, ಉಸ್ಮಾನ್‌ ಘನಿ 27, ಇಬ್ರಾಹಿಂ ಜದ್ರಾನ್‌ 22, ನಜೀಬುಲ್ಲಾ ಜದ್ರಾನ್‌ 18; ಕಸುನ್ ರಜಿತ 31ಕ್ಕೆ 1, ಲಹಿರು ಕುಮಾರ 30ಕ್ಕೆ 2, ವನಿಂದು ಹಸರಂಗ 13ಕ್ಕೆ 3, ಧನಂಜಯ ಡಿಸಿಲ್ವಾ 9ಕ್ಕೆ 1). ಶ್ರೀಲಂಕಾ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 148 (ಕುಶಾಲ್ ಮೆಂಡಿಸ್‌ 25, ಧನಂಜಯ ಡಿಸಿಲ್ವಾ ಔಟಾಗದೆ 66, ಚರಿತ ಅಸಲಂಕ 19, ಭಾನುಕಾ ರಾಜಪಕ್ಸ 18; ಮುಜೀಬುರ್ ರೆಹಮಾನ್‌ 24ಕ್ಕೆ 2, ರಶೀದ್ ಖಾನ್ 31ಕ್ಕೆ 2). ಫಲಿತಾಂಶ: ಶ್ರೀಲಂಕಾ ತಂಡಕ್ಕೆ ಆರು ವಿಕೆಟ್‌ಗಳ ಜಯ