ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!….
ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದು
ದಾಯಾದಿ ಬಂದುಗಳ ಬಿಡಲು ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯ ಜಾಪಿತ ನಿನ್ನಡಿಯ ಬಿಡಲಾಗದು !! ೧ ||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!……
ಒಡಲು ಹಸಿಯಲು ಅನ್ನವಿಲ್ಲದೆ ಇರಬಹುದು
ಪಡೆದ ಕ್ಷೇತ್ರಗಳ ಬಿಟ್ಟು ಹೊರಡಬಹುದು!
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು || ೨ ||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!….
ಪ್ರಾಣವನ್ನು ಪರರು ಬೇಡಿದರೆತ್ತಿ ಕೊಡಬಹುದು
ಮಾನಾಭಿಮಾನವ ತಗ್ಗಿಸಲೂ ಬಹುದು
ಪ್ರಾಣಧಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು! ||೩||
ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
ಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ
ರಚನೆ : ಕನಕದಾಸರು
ಗಾಯನ : ವೆಂಕಟೇಶ್ ಕುಮಾರ್