ಬೆಂಗಳೂರು ಗ್ರಾಮಾಂತರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಯುವಕನ ಅಂಗಾಂಗಗಳನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ.
ಹೋಬಳಿಯ ವಿಜಯಪುರ-ದಂಡಿಗಾನಹಳ್ಳಿ ರಸ್ತೆಯಲ್ಲಿ ಅ.23ರಂದು ನಡೆದ ಅಪಘಾತದಲ್ಲಿ ಹಾರೋಹಳ್ಳಿಯ ಯುವಕ ರಾಜು ಎಲ್(22) ಅವರ ತೀವ್ರವಾಗಿ ಗಾಯಗೊಂಡಿದ್ದ. ಆತನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ ಯುವಕನ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.
ರಾಜು ಅವರು ಹಾರೋಹಳ್ಳಿ ಗ್ರಾಮದ ಲಕ್ಷ್ಮಯ್ಯ, ವೆಂಕಟೇಶಮ್ಮ ಅವರ ಮೂರನೇ ಪುತ್ರ. ಪೋಷಕರು ತಮ್ಮ ಮಗನ ಹೃದಯ, ಮೂತ್ರ ಪಿಂಡಗಳು, ಎರಡು ಕಣ್ಣು, ಯಕೃತ್ತು ದಾನ ಮಾಡಿದ್ದಾರೆ. ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಜೀವ ಸಾರ್ಥಕ ಸಂಸ್ಥೆಗೆ ಅಂಗಾಂಗ ಒಪ್ಪಿಸಿದ್ದಾರೆ. ಮೃತ ಯುವಕನ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.
ಘಟನೆ ವಿವರ: ದೀಪಾವಳಿ ಹಬ್ಬಕ್ಕೆ ಮನೆಗೆ ಸಾಮಾನು ಖರೀದಿಸಲೆಂದು ಹೋಗಿದ್ದ ಯುವಕ ಮನೆಗೆ ವಾಪಸ್ ಬರುವಾಗ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.