ಗಂಗಾವತಿ : ಅಂಜನಾದ್ರಿಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೇವಲ ಕಾಂಕ್ರೀಟ್ ಮಯವಾಗದಿರಲಿ. ಇದರ ಬದಲಿಗೆ ನೈಸರ್ಗಿಕ ಮತ್ತು ಪಾರಂಪರಿಕ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ರಾಜವಂಶಸ್ಥ ಶ್ರೀಕೃಷ್ಣದೇವರಾಯ ಮನವಿ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ವಿಶ್ವವಿಖ್ಯಾತ ಅಂಜನಾದ್ರಿ ದೇಗುಲದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಇದೀಗ ಅಂಜನಾದ್ರಿಯಲ್ಲಿ ಸರ್ಕಾರದ ಉದ್ದೇಶಿತ ಅಭಿವೃದ್ಧಿಗೆ ಆನೆಗೊಂದಿಯ ಅರಸು ಪರಿವಾರ ವಿರೋಧ ವ್ಯಕ್ತಪಡಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಅವರು, ಅಂಜನಾದ್ರಿಯಲ್ಲಿ ಕಟ್ಟಡಗಳು ಬಹುಮಹಡಿ ಹೊಂದಿರದೇ ಕೇವಲ ಒಂದೇ ಮಹಡಿಗೆ ಸೀಮಿತಗೊಳಿಸಬೇಕು. ಮುಖ್ಯವಾಗಿ ಅಭಿವೃದ್ಧಿ ಬೆಟ್ಟದ ಸುತ್ತಲೂ ದೊಡ್ಡ ಪ್ರಮಾಣದಲ್ಲಿ ನಡೆದರೆ ನೈಸರ್ಗಿಕ ಸೊಬಗಿಗೆ ಧಕ್ಕೆಯಾಗಲಿದೆ. ಇದರ ಬದಲಿಗೆ ಸುತ್ತಲಿನ ಎರಡು ಮೂರು ಕಿಲೋ ಮೀಟರ್ ಅಂತರದಲ್ಲಿ ನಾನಾ ಸಮುಚ್ಛಯಗಳು ತಲೆ ಎತ್ತಬೇಕು. ಮುಖ್ಯವಾಗಿ ಥೀಮ್ ಪಾರ್ಕ್ಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪೌರಾಣಿಕ ದೇಗುಲ ಕಾಂಕ್ರೀಟ್ ಕಾಡಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.