ಮನೆ ರಾಜ್ಯ ಪಠ್ಯದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ನಿಜವಾದ ಶಿಕ್ಷಣ: ಡಾ. ಸುಧಾಮೂರ್ತಿ

ಪಠ್ಯದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ನಿಜವಾದ ಶಿಕ್ಷಣ: ಡಾ. ಸುಧಾಮೂರ್ತಿ

0

ಬೆಂಗಳೂರು(Bengaluru): ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ತಿಳಿಸಿದ್ದಾರೆ.

ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿನ ನೂತನ ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ವಿನೂತನ ಪ್ರಯೋಗಾಲಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯಗಳು ಆರಂಭವಾಗಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರಿಂದ ಒತ್ತಡ ಹೆಚ್ಚುತ್ತಿದೆ. ಪಕ್ಕದ ಮನೆ ಹುಡುಗೆ ಶೇ. 99 ಅಂಕ ಪಡೆದಿದ್ದು, ನೀನು ಅಷ್ಟೇ ಗಳಿಸಬೇಕು ಎನ್ನುತ್ತಾರೆ. ಇದು ಮಕ್ಕಳಿಗೆ ಹೇಳಬಹುದಾದ ಅತ್ಯಂತ ಕೆಟ್ಟ ವಿಧಾನದ ಬೋಧನೆ. ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೇ ಇಡೀ ಜೀವನವಲ್ಲ. ನೀವು ಉತ್ತಮ ಹಾಗೂ ಸಂತೋಷದ ಜೀವನ ಸಾಗಿಸಬೇಕಾದರೆ ಪಠ್ಯಕ್ರಮದ ಜತೆಗೆ ಬೇರೆ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು. ಅಂಕಗಳೇ ಸರ್ವಸ್ವ ಎಂದು ಭಾವಿಸಬಾರದು. ಮಾಡುವ ಕೆಲಸದಲ್ಲಿ  ನಿಪುಣತೆ ಸಾಧಿಸುವುದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಧೈರ್ಯ, ಆತ್ಮವಿಶ್ವಾಸ, ಪರಿಸ್ಥಿತಿ ಹೇಗೆ ಎದುರಾಗುತ್ತದೆಯೋ ಅವುಗಳನ್ನು ಹಾಗೆಯೇ ಸ್ವೀಕರಿಸುವ ಮನೋಭಾವ ಹೊಂದುವುದು ಬಹಳ ಮುಖ್ಯ ಎಂದು ಹೇಳಿದರು.

ನನ್ನ ಹಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ಅವರು ಜೀವನದಲ್ಲಿ ಯಶಸ್ಸು ಸಾಧಿಸದಿರುವ ಸಾಕಷ್ಟು ಉದಾಹರಣೆಗಳಿವೆ. ಮಕ್ಕಳ ತಪ್ಪುಗಳನ್ನು ಮೊದಲು ಮನೆಯಲ್ಲಿ ಅದರಲ್ಲೂ ತಾಯಿ ಸರಿಪಡಿಸಬೇಕು. ನಂತರ ಶಾಲೆಯಲ್ಲಿ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಬೇಕು. ಹೀಗಾಗಿ ಮಕ್ಕಳು ಎಳೆಯವರಾಗಿದ್ದಾಗಲೇ ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.

ಇಂದಿನ ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಮಕ್ಕಳು ಗೂಗಲ್ ನಲ್ಲೇ ಆ ವಿಚಾರಗಳನ್ನು ಕಲಿಯುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರಿದ್ದು, ಪಾಠ ಮಾಡುವ ಮುನ್ನ ಬೋಧಕರು ಉತ್ತಮ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಭಯ ಹೋಗಲಾಡಿಸಬೇಕು. ಅವರು ಕಲಿಯಲು ಆಸಕ್ತಿ ತೋರುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೆ, ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಉತ್ತೇಜನ ನೀಡಬೇಕು.  ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಆಗ ಮಕ್ಕಳು ತಮ್ಮ ಸಾಮರ್ಥ್ಯದ ಮೇಲೆ ಅನುಮಾನ ಬೆಳೆಸಿಕೊಂಡು ಇನ್ನಷ್ಟು ಕುಗ್ಗುತ್ತವೆ. ಹೀಗಾಗಿ ಇಂತಹ ಪ್ರಯೋಗಾಲಯಗಳು ಬಹಳ ಮುಖ್ಯ. ಇಂತಹ ಪ್ರಯೋಗಾಲಯಗಳು ರಾಜ್ಯದ ಎಲ್ಲ ಶಾಲೆಗಳಲ್ಲೂ ಇರಬೇಕು ಎಂದು ಹೇಳಿದರು.