ಅಡಿಲೇಡ್: ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಕಾಟದ ಹೊರತಾಗಿಯೂ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಂತೆ ಬಾಂಗ್ಲಾದೇಶಕ್ಕೆ 16 ಓವರ್‌ಗಳಿಗೆ 151 ರನ್‌ಗಳ ಗುರಿಯನ್ನು ನೀಡಲಾಯಿತು. 6 ವಿಕೆಟ್ ನಷ್ಟಕ್ಕೆ 145 ರನ್‌ಗಳನ್ನಷ್ಟೇ ಗಳಿಸಲು ಬಾಂಗ್ಲಾಕ್ಕೆ ಸಾಧ್ಯವಾಯಿತು.
ಮಳೆಗೂ ಮುನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಅರ್ಧ ಶತಕ ದಾಖಲಿಸಿದ್ದ ಲಿಟನ್ ದಾಸ್ ರನ್ ಔಟ್ ಆಗಿದ್ದು ಬಾಂಗ್ಲಾ ಪಾಲಿಗೆ ಬರಸಿಡಿಲಾಯಿತು. 8ನೇ ಓವರ್‌ನಲ್ಲಿ ರನ್ ಕದಿಯುತ್ತಿದ್ದ ವೇಳೆ ಕೆ.ಎಲ್. ರಾಹುಲ್ ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಬಿದ್ದಿದ್ದರಿಂದ ಬಾಂಗ್ಲಾದ ಗೆಲುವಿನ ಕನಸು ಅರ್ಧಕ್ಕೆ ದಿಕ್ಕು ತಪ್ಪಿತು. ಲಿಟನ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 60 ರನ್ ಪೇರಿಸಿದರು.
ಬಾಂಗ್ಲಾದ ಗೆಲುವಿನ ಕನಸನ್ನು ನೂರುಲ್ ಹಸನ್ ಮತ್ತು ತಸ್ಕಿನ್ ಅಹಮದ್ ಕೊನೆಯ ಎಸೆತದ ವರೆಗೆ ಕಾಪಿಟ್ಟುಕೊಂಡು ಬಂದರು. ಆದರೆ ಅಂತಿಮವಾಗಿ ಆರ್ಷದೀಪ್ ಸಿಂಗ್ ಎಸೆತವನ್ನು ಸಿಕ್ಸರ್ ಆಗಿ ಪರಿವರ್ತಿಸುವಲ್ಲಿ ಸೋತರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಆರು ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ವಿರಾಟ್ ಕೊಹ್ಲಿ (64*) ಹಾಗೂ ಕೆ.ಎಲ್. ರಾಹುಲ್ (50*) ಅಮೋಘ ಅರ್ಧಶತಕ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ 184/6
ಬಾಂಗ್ಲಾದೇಶಕ್ಕೆ 16 ಓವರ್‌ಗೆ 151 ರನ್ ಗುರಿ
ಬಾಂಗ್ಲಾದೇಶ 145/6
ಬಾಂಗ್ಲಾ ಪರ
ನಜ್ಮುಲ್ ಹುಸೇನ್ ಶಾಂತೊ: 25 ಎಸೆತಕ್ಕೆ 21 ರನ್
ಲಿಟನ್ ದಾಸ್: 27 ಎಸೆತಕ್ಕೆ 60 ರನ್
ನೂರುಲ್ ಹಸನ್: 14 ಎಸೆತಕ್ಕೆ 25 ರನ್
ತಸ್ಕಿನ್ ಅಹಮದ್: 7 ಎಸೆತಕ್ಕೆ 12 ರನ್
ಭಾರತ ಪರ ಆರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್, ಮೊಹಮ್ಮದ್ ಶಮಿ 1 ವಿಕೆಟ್