ಯಳಂದೂರು: ತಾಲೂಕಿನ ಬನ್ನಿಸಾರಿಗೆ ಗ್ರಾಮದ ಬಳಿ ಇರುವ ಕೆರೆಯನ್ನು ಮುಚ್ಚಿ ಸ್ಮಶಾನವನ್ನು ನಿರ್ಮಿಸಲು ಮುಂದಾಗಿರುವ ಕಂದಾಯ ಇಲಾಖೆಯ ಕ್ರಮಕ್ಕೆ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬನ್ನಿಸಾರಿಗೆ ಗ್ರಾಮದ ಹೊರ ವಲಯದಲ್ಲಿರುವ ಸರ್ವೇ ನಂ ೯೮೭ ರಲ್ಲಿರುವ ೧.೧೮ ಎಕರೆ ಜಮೀನಿನಲ್ಲಿ ಸರ್ಕಾರಿ ಜಮೀನಿದೆ. ಇಲ್ಲೇ ೩೦ ಗುಂಟೆ ಜಮೀನಿನಲ್ಲಿ ೨೦೦೫ ರಲ್ಲಿ ಸ್ಮಶಾನ ಸ್ಥಳವೆಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ ಸರ್ಕಾರ ಈ ಸ್ಥಳದಲ್ಲಿ ಸ್ಮಶಾನ ಮಾಡಲು ಇಲ್ಲಿರುವ ಮಂಚೇಗೌಡನಕಟ್ಟೆಯನ್ನು ಆರಿಸಿಕೊಂಡಿರುವ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆರೆಯನ್ನು ಮುಚ್ಚಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಇದರಲ್ಲಿ ನೀರು ತುಂಬುವುದರಿAದ ಅಕ್ಕಪಕ್ಕದ ಜಮೀನಿಗೆ ಅಂತರ್ಜಲ ವೃದ್ಧಿಸುತ್ತದೆ. ಆದರೆ ಇದರ ಪರಿವೆಯೇ ಇಲ್ಲದಂತೆ ಅಧಿಕಾರಿಗಳು ಕೆರೆಯ ಏರಿಯನ್ನು ಒಡೆದಿದ್ದಾರೆ. ಇದನ್ನು ಮುಚ್ಚಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಬ್ಬು ನಾಶ: ಇದರ ಬಳಿಯಲ್ಲೇ ಇರುವ ಜಯಶಂಕರ ಎಂಬುವವರು ಕಳೆದ ೩೦ ವರ್ಷಳಿಂದಲೂ ಈ ಕೆರೆಯ ಬಳಿ ರೇಷ್ಮೆ ಹುಳುವನ್ನು ಸಂಸ್ಕರಿಸುವ ಘಟಕವನ್ನು ನಿರ್ಮಾಣ ಮಾಡಿಕೊಂಡಿದ್ದರು. ಇದರ ಬಳಿಯಲ್ಲೇ ಸರ್ವೇ ನಂ. ೯೯೦/೧ ರಲ್ಲಿ ಇವರ ೩.೫ ಎಕರೆ ಜಮೀನಿದ್ದು ಕಬ್ಬನ್ನು ಬೆಳೆದಿದ್ದರು. ಸ್ಮಶಾನಕ್ಕೆ ಸರ್ವೇ ಮಾಡುವ ನೆಪದಲ್ಲಿ ಅಧಿಕಾರಿಗಳ ತಂಡ ಇವರು ಬೆಳೆದಿದ್ದ ೧ ಟನ್‌ಗೂ ಅಧಿಕ ತೂಕದ ಕಬ್ಬನ್ನು ನಾಶಪಡಿಸಿದ್ದಾರೆ. ಅಲ್ಲದೆ ಕೆರೆಯ ಏರಿಯನ್ನು ಒಡೆದು ಅದನ್ನು ಮುಚ್ಚಲಾಗಿದೆ ಎಂದು ಜಯಶಂಕರ್ ಆರೋಪಿಸಿದ್ದಾರೆ.
೮ ಕಟ್ಟೆಗಳನ್ನು ಮುಚ್ಚಲಾಗಿದೆ: ಗ್ರಾಮ ವ್ಯಾಪ್ತಿಯಲ್ಲಿ ಇದುವರೆವಿಗೂ ೧ ರಿಂದ ೨ ಎಕರೆ ಪ್ರದೇಶ ವ್ಯಾಪ್ತಿಯಲ್ಲಿದ್ದ ಒಟ್ಟು ೮ ಕೆರೆಕಟ್ಟೆಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮುಚ್ಚಿಹೋಗಿವೆ. ಗ್ರಾಮ ವ್ಯಾಪ್ತಿಯ ಪುಟ್ಟರಂಗನಕೆರೆ, ಹೊಸಕೆರೆಯಪ್ಪ, ಮರಣಿಕಟ್ಟೆ, ಅರಳಿಕಟ್ಟೆ, ಅಲಿಗರಯ್ಯನಕಟ್ಟೆ, ಮಗನಕಟ್ಟೆ, ಚಿಕ್ಕಯ್ಯಮಕಟ್ಟೆ, ಲಕ್ಕಯ್ಯನಕಟ್ಟೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡದವರು ವಾಸವಾಗಿರುವ ಈ ಸ್ಥಳದಲ್ಲಿದ್ದ ಕಟ್ಟೆಯನ್ನೂ ಮುಚ್ಚಲು ಯತ್ನಿಸುತ್ತಿರುವ ಅಧಿಕಾರಿಗಳ ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.