ಮನೆ ರಾಜಕೀಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜಕೀಯ ಪ್ರಚಾರವಷ್ಟೆ: ಎಂ.ಲಕ್ಷ್ಮಣ್

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜಕೀಯ ಪ್ರಚಾರವಷ್ಟೆ: ಎಂ.ಲಕ್ಷ್ಮಣ್

0

ಮಡಿಕೇರಿ(Madikeri): ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ರಾಜಕೀಯ ಪ್ರಚಾರವಷ್ಟೆ ಆಗಿದೆ‌ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾವೇಶದ ಜಾಹೀರಾತಿಗೆ‌ ₹120 ಕೋಟಿ ಸಾರ್ವಜನಿಕರ ಹಣ ವ್ಯಯಿಸಲಾಗಿದೆ. ಸಮಾವೇಶದಲ್ಲಿ ಬಂಡವಾಳ ಹೂಡಿಕೆ ಕುರಿತು ಘೋಷಣೆಯಷ್ಟೇ ಆಗಿದೆ. ಯಾರ ಜತೆಯೂ ನಿರ್ದಿಷ್ಟ ಒಪ್ಪಂದ ಆಗಿಲ್ಲ. ಅಲ್ಲಿ ಹಾಕಿದ್ದ 160 ಮಳಿಗೆಗಳ ಪೈಕಿ ಕೇವಲ 56 ಮಳಿಗೆಗಳು ಮಾತ್ರವೇ ಭರ್ತಿಯಾಗಿದೆ ಎಂದರು.

ಈ ಸಮಾವೇಶದಲ್ಲಿ ಕೊಡಗಿಗೆ ಎಷ್ಟು ಪಾಲು ಸಿಕ್ಕಿದೆ ಎಂಬುದನ್ನು ಇಲ್ಲಿನ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಸಂಸದ ಪ್ರತಾಪಸಿಂಹ ಅವರು ಕೊಡಗನ್ನು ಒಂದು ಪ್ರವಾಸಿತಾಣವಾಗಿ ಪರಿಗಣಿಸಿದ್ದಾರೆ. ಈ ಹಿಂದೆ ಅವರು ಕೊಡಗಿಗೆ ಭೇಟಿ ನೀಡಿದ ದಿನಾಂಕ ಅವರಿಗೆ ನೆನಪಿಲ್ಲ. ಏಕೆಂದರೆ ಕಳೆದ 6 ತಿಂಗಳಲ್ಲಿ ಅವರು ಕೇವಲ 2 ‌ಬಾರಿಯಷ್ಟೇ ಭೇಟಿ ನೀಡಿದ್ದಾರೆ ಎಂದು ಹೇಳಿದರು.
ಪತ್ರಿಕಾ ರಂಗ ಖರೀದಿಸಲು ಯತ್ನಿಸಿದ ಬಿಜೆಪಿ:

ಭ್ರಷ್ಟಾಚಾರವನ್ನೇ ಹೊದ್ದುಕೊಂಡಿರುವ ಬಿಜೆಪಿ ಸರ್ಕಾರ ಇದೀಗ ಆ ಕಳಂಕವನ್ನು ಪತ್ರಕರ್ತರಿಗೆ ಮೆತ್ತುವ ಕೆಲಸ ಮಾಡಿದೆ. ಇಂತಹ ಕೆಲಸವನ್ನು ಬಸವರಾಜ ಬೊಮ್ಮಾಯಿ ಅವರಂತಹವರಿಂದ ನಿರೀಕ್ಷೆ ಮಾಡಿರಲಿಲ್ಲ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಶಾಸಕರನ್ನು ಖರೀದಿ ಮಾಡಿದ ಬಿಜೆಪಿ ಇದೀಗ‌ ಪತ್ರಿಕಾ ರಂಗವನ್ನೇ ಖರೀದಿಸಲು ಯತ್ನಿಸಿದೆ. ಪ್ರಾಮಾಣಿಕ ಪತ್ರಕರ್ತರು ಅವರು ನೀಡಿದ ಉಡುಗೊರೆಗಳನ್ನು ವಾಪಸ್ ಕಳಿಸಿ ಕರ್ನಾಟಕದ ಪತ್ರಿಕಾ ರಂಗದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.

ಕೊಡಗಿಗೆ ಕಾಂಗ್ರೆಸ್ ನೀಡಿರುವ ಕೊಡುಗೆಗಳು ಹಾಗೂ ಬಿಜೆಪಿ ನೀಡಿರುವ ಕೊಡುಗೆಗಳನ್ನು ಪಟ್ಟಿಯನ್ನು ಇದೇ ಅವರು ಬಿಡುಗಡೆ ಮಾಡಿದರು.