ಮನೆ ರಾಷ್ಟ್ರೀಯ ಸೇನೆಗೆ ಸೇರಿದ ಭೂಮಿ ಒತ್ತುವರಿ: 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ

ಸೇನೆಗೆ ಸೇರಿದ ಭೂಮಿ ಒತ್ತುವರಿ: 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ

0

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಭೂಮಿ ಒತ್ತುವರಿ, ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಿಧನಗರ್‌ನ ಸಾಲ್ಟ್‌ಲೇಕ್‌ನಲ್ಲಿರುವ ಕೋಲ್ಕತ್ತ ಮೂಲದ ಉದ್ಯಮಿ ಅಮಿತ್‌ ಅಗರವಾಲ್‌ ಅವರ ನಿವಾಸ ಮತ್ತು ಕಚೇರಿ ಆವರಣದಲ್ಲಿಯೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಆಪ್ತರಾಗಿರುವ ಅಮಿತ್‌ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಶೋಧ ನಡೆಸಿದೆ. ಅವರನ್ನು ಅಕ್ಟೋಬರ್‌ 8 ರಂದು ಬಂಧಿಸಿತ್ತು.ಅಕ್ರಮವಾಗಿ ಕಲ್ಲಿದ್ದಲು ಸಾಗಣೆ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಅಮಿತ್‌ ಅವರ ಬಳಿ ಇವೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಸೊರೇನ್ ಅವರು ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆ ಸಲುವಾಗಿ ಗುರುವಾರ ಇ.ಡಿ ಎದುರು ಹಾಜರಾಗಬೇಕಿತ್ತು. ಆದರೆ, ಅವರು ವಿಚಾರಣೆಗೆ ತಪ್ಪಿಸಿಕೊಂಡಿದ್ದರು. ಇದಾದ ಮರುದಿನವೇ ಜಾರ್ಖಂಡ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.