ಮೈಸೂರು(Mysuru): ನಗರದ ಇಟ್ಟಿಗೆಗೂಡಿನ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಎದುರಿಗಿರುವ ಕೆಇಬಿ ಕಂಬದಿಂದ ವಿದ್ಯುತ್ ವೈರ್ ಗಳು ಹೊರಚಾಚಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಈ ರಸ್ತೆಯಲ್ಲಿ ಹೆಸರಾಂತ ಪ್ರವಾಸಿ ತಾಣ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಪ್ಲಾನೆಟ್ ಅರ್ಥ್ ಅಕ್ವೇರಿಯಂ ಇದ್ದು, ಪ್ರವಾಸಿಗರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಓಡಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ಅಕಾಲಿಕ ಮಳೆಯಾಗುತ್ತಿದ್ದು, ಕೆಇಬಿ ಕಂಬದಿಂದ ಹೊರಚಾಚಿರುವ ವಿದ್ಯುತ್ ವೈರ್ ಗಳಿಂದ ಸಾಕಷ್ಟು ಅನಾಹುತವಾಗುವ ಆತಂಕ ಎದುರಾಗಿದೆ.
ಅಲ್ಲದೇ ಇದೇ ಸ್ಥಳದಲ್ಲಿರುವ ಮರದ ಕೊಂಬೆಯೂ ನೇತಾಡುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರ ತಲೆ ಮೇಲೆ ಬೀಳುವಂತಿದೆ. ಇದರಿಂದಾಗಿ ಸಾರ್ವಜನಿಕರು , ವಿದ್ಯಾರ್ಥಿಗಳು ಆತಂಕದಲ್ಲಿಯೇ ಓಡಾಡಬೇಕಿದೆ.
ಹತ್ತಿರದಲ್ಲಿಯೇ ಚಿರಾಗ್ ಹೋಟೆಲ್ ಕೂಡ ಇದ್ದು, ಹೋಟೆಲ್ ಗೆ ಆಗಮಿಸುವ ಗ್ರಾಹಕರು ಹಾಗೂ ಸಿಬ್ಬಂದಿ ಮರದ ಕೆಳಗೆ ವಾಹನ ನಿಲುಗಡೆ ಮಾಡುತ್ತಾರೆ. ಮರದ ಕೊಂಬೆ ಕೆಳಗೆ ಬಿದ್ದರೆ ವಾಹನ ಜಖಂಗೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಸರ್ಕಾರಿ ಕಚೇರಿ ಎದುರಿನಲ್ಲಿಯೇ ಈ ಸಮಸ್ಯೆಗಳಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆದ್ದರಿಂದ ಕೂಡಲೇ ಚೆಸ್ಕಾಂ ಸಿಬ್ಬಂದಿ ಕೆಇಬಿ ಕಂಬವನ್ನು ದುರಸ್ತಿಗೊಳಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು. ಅಂತೆಯೇ ಪಾಲಿಕೆ ಅಧಿಕಾರಿಗಳು ನೇತಾಡುತ್ತಿರುವ ಮರದ ಕೊಂಬೆಯನ್ನು ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.