ಮನೆ ಅಪರಾಧ 18 ಶಾಸಕರು, 25 ಪ್ರಭಾವಿಗಳನ್ನು ಹನಿಟ್ರ್ಯಾಪ್ ಮಾಡಿದ್ದ ಅರ್ಚನಾ ನಾಗ್ ಹಣದ ವ್ಯವಹಾರ ನೋಡಿ ದಂಗಾದ...

18 ಶಾಸಕರು, 25 ಪ್ರಭಾವಿಗಳನ್ನು ಹನಿಟ್ರ್ಯಾಪ್ ಮಾಡಿದ್ದ ಅರ್ಚನಾ ನಾಗ್ ಹಣದ ವ್ಯವಹಾರ ನೋಡಿ ದಂಗಾದ ಇಡಿ ಅಧಿಕಾರಿಗಳು

0

ಭುವನೇಶ್ವರ್​: 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ಹನಿಟ್ರ್ಯಾಪ್ ಮಾಡಿ ಹಣ ದೋಚಿದ್ದ ಬ್ಲಾಕ್ ಮೇಲರ್ ಅರ್ಚನಾ ನಾಗ್ ಎಂಬ ಮಹಿಳೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಅರ್ಚನಾಳ ಹನಿಟ್ರ್ಯಾಪ್​ ಮತ್ತು ಹಣ ಸುಲಿಗೆ ಪ್ರಕರಣದ ತನಿಖೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಹ ಸೇರಿಕೊಂಡಿದೆ. ಅರ್ಚನಾಳ ಹಣದ ವ್ಯವಹಾರದ ಕುರಿತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಒಡಿಶಾ ಹೊರಗಡೆ ಇರುವ ಅನೇಕ ಕಂಪನಿಗಳ ಜೊತೆ ಅರ್ಚನಾಗೆ ಸಂಪರ್ಕ ಇರುವುದಾಗಿ ತಿಳಿದುಬಂದಿದೆ. ಅರ್ಚನಾಳ ಸರಣಿ ಹಣಕಾಸಿನ ವಹಿವಾಟುಗಳನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿರುವ ಕಂಪನಿಗಳ ನಡುವೆ ಭಾರಿ ಮೊತ್ತದ ವಹಿವಾಟು ನಡೆದಿರುವುದಾಗಿ ಇಡಿ ಮೂಲಗಳು ತಿಳಿಸಿವೆ.

ತನಿಖೆಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಅರ್ಚನಾ ನಾಗ್ ಅವರ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅರ್ಚನಾಳ ಎಟಿಎಂ ಕಾರ್ಡ್‌ನಿಂದ ಹಲವಾರು ಸಂದರ್ಭಗಳಲ್ಲಿ ಭಾರಿ ಮೊತ್ತದ ಹಣ ಜಮಾ ಆಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.

ಸದ್ಯ ಕಂಪನಿಗಳೊಂದಿಗೆ ಅರ್ಚನಾಳ ಸಂಬಂಧ ಮತ್ತು ಹಣಕಾಸಿನ ವಹಿವಾಟಿನ ಉದ್ದೇಶವನ್ನು ತಿಳಿಯಲು ಇಡಿ ಅಧಿಕಾರಿಗಳಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಬ್ಲಾಕ್ ಮೇಲರ್ ಅರ್ಚನಾ

26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸ. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ತನಿಖೆ ವೇಳೆಯಲ್ಲಿ ಈಕೆಯ ಬ್ಲಾಕ್ ಮೇಲ್ ಪುರಾಣಗಳು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ.

ಈಕೆ 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.

30 ಕೋಟಿ ಆಸ್ತಿ

2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ.