ಮಂಡ್ಯ(Mandya): ಶ್ರೀರಂಗಪಟ್ಟಣದ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಕೆಆರ್ಎಸ್ ಅಣೆಕಟ್ಟೆಯಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಬೃಂದಾವನ ಪ್ರವೇಶಕ್ಕೆ ಸೋಮವಾರ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೆ ಕಳೆದ 20 ದಿನಗಳ ಅಂತರದಲ್ಲಿ ನಾಲೈದು ಬಾರಿ ಕಾಣಿಸಿಕೊಂಡಿರುವ ಚಿರತೆ ಇಡೀ ಬೃಂದಾವನ ಹಾಗೂ ಅಣೆಕಟ್ಟೆಯ ಎಲ್ಲೆಡೆ ತಿರುಗಾಡಿದ್ದು, ಸಿಬ್ಬಂದಿ ಹಾಗೂ ಪ್ರವಾಸಿಗರದಲ್ಲಿ ಆತಂಕ ಮೂಡಿಸಿದೆ.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಹಾಗೂ ಭಾನುವಾರ ಮಧ್ಯಾಹ್ನ 1.50ಕ್ಕೆ ಅಣೆಕಟ್ಟೆಯ ಮೀನುಗಾರಿಕೆ ಇಲಾಖೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಅ.21ರಂದು ಹಾಡಹಗಲೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿತ್ತು. ನಂತರ ಶ್ರೀರಂಗಪಟ್ಟಣದ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನ್ ಸಹ ಇಟ್ಟಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಚಿರತೆಯು ಬೃಂದಾವನದ ಟಿಕೆಟ್ ಕೌಂಟರ್ ಬಳಿ ಕಾಣಿಸಿಕೊಂಡಿದೆ.
ಚಿರತೆ ಇರುವುದು ಗೊತ್ತಾದ ಹಿನ್ನೆಲೆಯಲ್ಲಿ ಕೆಲ ಪ್ರವಾಸಿಗರು ಭಯದಿಂದ ಬೃಂದಾವನದಿಂದ ಹೊರಗೆ ಓಡಿ ಹೋಗಿದ್ದಾರೆ. ಮಕ್ಕಳು, ಮಹಿಳೆಯರು ಚೀರುತ್ತಾ ಓಡಿ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರವಾಸಿಗರ ಆಕ್ರೋಶ: 15 ದಿನಗಳ ಹಿಂದೆಯೇ ಬೃಂದಾವನದಲ್ಲಿ ಚಿರತೆ ಇರುವುದು ಗೊತ್ತಿದ್ದರೂ ಬೃಂದಾವನ ಬಂದ್ ಮಾಡದಿರುವುದಕ್ಕೆ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಹೊರಜಿಲ್ಲೆ, ಹೊರರಾಜ್ಯಗಳ ಲಕ್ಷಾಂತರ ಪ್ರವಾಸಿಗರು ಕೆಆರ್ ಎಸ್ ಗೆ ಭೇಟಿ ನೀಡುತ್ತಾರೆ. ಹಿಂದೆಯೇ ಚಿರತೆ ಕಾಣಿಸಿಕೊಂಡಿದ್ದರೂ ಅದನ್ನು ಮುಚ್ಚಿಟ್ಟು ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.














