ಉಡುಪಿ(Udupi): ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ. ಭ್ರಷ್ಟಾಚಾರ ಪ್ರಾರಂಭ ಆಗಿರುವುದೇ ಅವರ ಅವಧಿಯಲ್ಲಿ. ಅವರ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಉಡುಪಿಯಲ್ಲಿ ಸೋಮವಾರ ಮಾತನಾಡಿದ ಅವರು, ಸುಳ್ಳು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾದರೆ ಏಕೆ ತನಿಖೆಗೆ ವಹಿಸಲ್ಲ ಎಂಬ ಪ್ರಶ್ನೆಗೆ, ಈಗಾಗಲೇ ಮುರ್ನಾಲ್ಕು ತನಿಖೆ ಆಗಿದೆ. ಮುಂದಿನ ದಿನಗಳಲ್ಲೂ ಮತ್ತಷ್ಟು ತನಿಖೆಗೆ ನೀಡುತ್ತೇವೆ ಎಂದರು.
ಸಿದ್ದರಾಮಯ್ಯ ಭ್ರಮೆಯಲ್ಲಿ ಇದ್ದಾರೆ. ಐದು ವರ್ಷ ಆಡಳಿತ ಮಾಡಿದಾಗಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಬಿಎಸ್ ಯಡಿಯೂರಪ್ಪ ಹಾಗೂ ಎಚ್ ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಲ್ಲ ಎಂದಿದ್ದರು. ಆದರೆ ಏನಾಯಿತು? ಅವರು ಒಡೆದು ಆಳುವ ನೀತಿಯನ್ನು ಜನ ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಹೇಳಿದ್ದು ಏನೂ ಆಗಿಲ್ಲ. ಈ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದರು.
ಜನಸಂಕಲ್ಪ ಯಾತ್ರೆಗೆ ಉತ್ತಮ ಸ್ಪಂದನೆ
ರಾಜ್ಯದಲ್ಲಿ ನಡೆಸುತ್ತಿರುವ ಜನಸಂಕಲ್ಪ ಯಾತ್ರೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಜನಸಂಕಲ್ಪ ಯಾತ್ರೆ ಎರಡು ಸುತ್ತು ಕಲ್ಯಾಣ ಕರ್ನಾಟಕ ಮುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಹೋಗುತ್ತೇವೆ. ಕರಾವಳಿ ಮತ್ತು ಮುಂಬೈ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದರು.
ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನೆಯ ಜತೆ ಜನ ಸಂಘಟನೆಯನ್ನು ಮಾಡುತ್ತಿದ್ದೇವೆ. ಒಟ್ಟಿನಲ್ಲಿ ಜನಸ್ಪಂದನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನಸಂಕಲ್ಪದ ಯಾತ್ರೆಯ ಬಳಿಕ ಬಿಜೆಪಿ ಅಲೆ ರಾಜ್ಯದಲ್ಲಿ ಎದ್ದಿದೆ. ಕಾರ್ಯಕರ್ತರಲ್ಲೂ ಹೊಸ ಉತ್ಸಾಹ ಮೂಡುತ್ತಿದೆ ಎಂದರು.
ಎರಡು ದಿಕ್ಕಿನಿಂದ ರಥ ಯಾತ್ರೆ
ಜನಸ್ಪಂದನೆ ಯಾತ್ರೆಯ ಬಳಿಕ ಎರಡು ದಿಕ್ಕಿನಿಂದ ರಥ ಯಾತ್ರೆ ಉತ್ತರ ಹಾಗೂ ದಕ್ಷಿಣದಿಂದ ಪ್ರಾರಂಭ ಆಗಲಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದರು.