\ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ಇದೇ 11 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೆ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲೆಯ ಪದವಿಪೂರ್ವ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆತರುವಂತೆ ಹೊರಡಿಸಿದ್ದ ಸುತ್ತೋಲೆಯನ್ನು 24 ಗಂಟೆಯೊಳೆಗೆ ಹಿಂಪಡೆಯಲಾಗಿದೆ.
ಮಂಗಳವಾರ ಬೆಳಿಗ್ಗೆ ಹೊರಡಿಸಿದ ಸುತ್ತೋಲೆ ಮಾಧ್ಯಮಗಳಿಗೆ ಸೋರಿಕೆಯಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಆರ್. ಲತಾ, ಸುತ್ತೋಲೆ ವಾಪಸು ಪಡೆಯುವಂತೆ ಸೂಚಿಸಿದ್ದರು. ಅದರ ಬೆನ್ನಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ರಾತ್ರಿ ಮತ್ತೊಂದು ಸುತ್ತೋಲೆ ಹೊರಡಿಸಿ, ‘ಈ ಮೊದಲಿನ ಸುತ್ತೋಲೆ ವಾಪಸ್ ಪಡೆದಿರುವುದಾಗಿ’ ಹೇಳಿದರು.
ಸುತ್ತೋಲೆಯಲ್ಲಿ ಏನಿತ್ತು?:
ಪ್ರಧಾನಿ ಬರುತ್ತಿರುವ ಪ್ರಯುಕ್ತ, ನ. 2ರಂದು ನಡೆದ ಪ್ರಾಂಶುಪಾಲರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ, ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ನಿಗದಿಪಡಿಸಿದಷ್ಟು ವಿದ್ಯಾರ್ಥಿಗಳನ್ನು ನೋಡಲ್ ಅಧಿಕಾರಿಗಳ ಮೂಲಕ ಕಾಲೇಜಿನಿಂದ ಹೊರಡುವ ಬಸ್ಸಿನಲ್ಲಿ ಕರೆದುಕೊಂಡು ಬರ ಬೇಕು. ತಪ್ಪಿದರೆ ಮುಂದಿನ ಆಗು ಹೋಗುಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ’ ಎಂದು ಎಚ್ಚರಿಕೆ ನೀಡಲಾಗಿತ್ತು.
ಜಿಲ್ಲಾಧಿಕಾರಿ ಹೇಳುವುದೇನು ?
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಂಥ ಯಾವುದೇ ಸೂಚನೆ ಅಥವಾ ಚರ್ಚೆ ನಮ್ಮ ಕಡೆಯಿಂದ ಆಗಿಲ್ಲ. ನಾನು ಯಾವುದೇ ಕಾಲೇಜಿನ ಉಪನ್ಯಾಸಕರು ಮತ್ತು ಪ್ರಾಂಶುಪಾಲರನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ.