ಮನೆ ಸುದ್ದಿ ಜಾಲ ಮೈಸೂರು: ಹುಲಿ ದಾಳಿಗೆ ಹಸು ಬಲಿ- ಆತಂಕದಲ್ಲಿ ಜನತೆ

ಮೈಸೂರು: ಹುಲಿ ದಾಳಿಗೆ ಹಸು ಬಲಿ- ಆತಂಕದಲ್ಲಿ ಜನತೆ

0

ಮೈಸೂರು: ನಾಗರಹೊಳೆ ಉದ್ಯಾನವನದಂಚಿನ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿರುವ ಘಟನೆ ಮಂಗಳವಾರ ಹುಣಸೂರು ತಾಲೂಕಿನ ಬಿ.ಆರ್. ಅರಣ್ಯದಂಚಿನಲ್ಲಿ ನಡೆದಿದ್ದು, ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ತಾಲೂಕಿನ ಹನಗೋಡು ಹೋಬಳಿಯ ಗೌಡಿಕೆರೆ ಗ್ರಾಮದ ಶೇಖರ್ ಎಂಬವರಿಗೆ ಸೇರಿದ ಹಸುವನ್ನು ಕೊಂದಿರುವ ಹುಲಿ ಸುಮಾರು ಅಂದಾಜು 200 ಮೀ. ನಷ್ಟು ದೂರಕ್ಕೆ ಎಳೆದೊಯ್ದು ಬಿಟ್ಟು ಹೋಗಿದೆ. ಹಸುವಿನ ಮಾಲಿಕ ಶೇಖರ್ ಮೇವು ಮೇಯ್ಯುವ ಜಾಗಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಹಸುವೊಂದನ್ನು ಹುಲಿ ಗಾಯಗೊಳಿಸಿ ಬಿಟ್ಟು ಹೋಗಿತ್ತು. ಈ ಹಸು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಸತತ ಎರಡು ದಿನಗಳಿಂದ ಈ ಭಾಗದಲ್ಲಿ ಹುಲಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಜನತೆ ಆತಂಕಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾಗಿದ್ದಾರೆ.

ಅರಣ್ಯ ಇಲಾಖೆಯ ಉಪವಲಯಣ್ಯಧಿಕಾರಿ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಇಲಾಖೆಯಿಂದ ಬರುವ ಪರಿಹಾರ ಧನವನ್ನು ಕೂಡಲೆ ವಿತರಿಸಲಾಗುವುದು ಎಂದು ತಿಳಿಸಿದರು.