ಮನೆ ಶಿಕ್ಷಣ ವಿದ್ಯಾರ್ಥಿಗಳು ದೊಡ್ಡ ಕನಸಿಟ್ಟುಕೊಂಡರೆ ಉನ್ನತ ಸ್ಥಾನಕ್ಕೇರಲು ಸಾಧ್ಯ: ಪ್ರೊ.ಜಿ.ಹೇಮಂತ್ ಕುಮಾರ್

ವಿದ್ಯಾರ್ಥಿಗಳು ದೊಡ್ಡ ಕನಸಿಟ್ಟುಕೊಂಡರೆ ಉನ್ನತ ಸ್ಥಾನಕ್ಕೇರಲು ಸಾಧ್ಯ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು(Mysuru):  ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡರೆ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ವಿಜ್ಞಾನ ಭವನದಲ್ಲಿ ಸ್ಕೂಲ್ ಆಫ್ ಎಂಜಿನಿಯರ್ ವತಿಯಿಂದ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಎಂಜಿನಿಯರಿಂಗ್ ಕಾಲೇಜಿಗೆ ನಮ್ಮ ಮೇಲೆ ನಂಬಿಕೆ ಇಟ್ಟು ಸೇರಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಎಐಸಿಟಿಇ ಅನುಮತಿ ಪಡೆದು ಎಂಜಿನಿಯರ್ ಕಾಲೇಜು ತೆರೆದು ಇದೀಗ ಒಂದು ವರ್ಷ ಮುಗಿದಿದೆ. 20 ತಿಂಗಳಿನಲ್ಲಿ 12 ಎಕರೆ ಜಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ತಲೆ ಎತ್ತಿತು. ಮೊದಲ ವರ್ಷ ಯಶಸ್ವಿಯಾಗಿ ನಡೆದಿದೆ. ಯಾವ ಎಂಜಿನಿಯರಿಂಗ್ ಕೂಡ ವ್ಯರ್ಥ ಅಲ್ಲ. ಯಾವ ವಿಷಯ ತೆಗೆದುಕೊಂಡರೂ ವಿದ್ಯಾರ್ಥಿಗಳು ಪ್ರೀತಿಯಿಂದ ಓದಬೇಕು. ಥಿಯರಿ ಜೊತೆಗೆ ಪ್ರಾಕ್ಟಿಕಲ್ ಜ್ಞಾನವನ್ನು ಹೆಚ್ಚು ಬೆಳೆಸಿಕೊಳ್ಳಬೇಕು ಎಂದರು.

ಕುಲಸಚಿವ ಪ್ರೊ. ಆರ್.ಶಿವಪ್ಪ ಮಾತನಾಡಿ, ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಸದ್ದುದ್ದೇಶದಿಂದ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕೂಡ ತೆರೆದ ಮನಸ್ಸನಿಂದ, ಸದ್ದುದ್ದೇಶದಿಂದ ಮೈಸೂರು ವಿವಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಏನೇ ಕೆಲಸ ಮಾಡಿದರೂ ಆತುರದಿಂದ ಮಾಡದೆ ಯೋಚಿಸಬೇಕು. ದೈಹಿಕ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು. ಒಳ್ಳೆಯ ಸ್ನೇಹಿತರೊಂದಿಗೆ ಬೆರೆಯಬೇಕು. ಉತ್ತಮ ಆರೋಗ್ಯದ ಜೊತೆ ದೈಹಿಕ ಸದೃಢತೆ ಇರಬೇಕು. ಸದಾ ನಗುತ್ತಾ ಇರಬೇಕು. ಪ್ರಕೃತಿಯನ್ನು ಪ್ರೀತಿಸಬೇಕು ಸೇರಿದಂತೆ ಒಂಬತ್ತು ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು.

ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕ ಡಾ.ಅನಂತ ಪದ್ಮನಾಭ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಮೈಸೂರು ವಿವಿ ವಿಶೇಷಾಧಿಕಾರಿ ಡಾ.ಚೇತನ್ , ಡೀನ್ ಡಾ.ಶಂಕರ್ ಸೇರಿದಂತೆ ಇತರರು ಇದ್ದರು.