ಮನೆ ರಾಜಕೀಯ ಬೆಂಗಳೂರು ಸ್ಟಾರ್ಟ್ ಅಪ್ ಸ್ಪಿರಿಟ್ ನ ಪ್ರತಿನಿಧಿ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು ಸ್ಟಾರ್ಟ್ ಅಪ್ ಸ್ಪಿರಿಟ್ ನ ಪ್ರತಿನಿಧಿ: ಪ್ರಧಾನಿ ನರೇಂದ್ರ ಮೋದಿ

0

ಬೆಂಗಳೂರು(Bengaluru): ವಿಶ್ವದಲ್ಲಿ ಭಾರತವು ತನ್ನ ಸ್ಟಾರ್ಟ್ ಅಪ್ ಗಳಿಂದ ಗುರುತಿಸಿಕೊಳ್ಳುತ್ತಿದೆ. ಅದಕ್ಕೆ ಬೆಂಗಳೂರು ದೊಡ್ಡ ಕೊಡುಗೆ ನೀಡುತ್ತಿದೆ. ಬೆಂಗಳೂರು ಸ್ಟಾರ್ಟ್ ಅಪ್ ಸ್ಪಿರಿಟ್ ನ ಪ್ರತಿನಿಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಂದೇ ಭಾರತ್ ರೈಲು, ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ಉದ್ಘಾಟನೆ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘’ಕರ್ನಾಟಕ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು…” ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.

ಕರ್ನಾಟಕಕ್ಕಿಂದು ಮೊದಲ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲು ಸಿಕ್ಕಿದೆ. ರಾಜ್ಯದ ಜನತೆಗೆ ಅಯೋಧ್ಯಾ- ಪ್ರಯಾಗ್ ರಾಜ್ ಕಾಶಿ ದರ್ಶನ ಮಾಡುವ ಭಾರತ್ ಗೌರವ್ ಕಾಶಿ ದರ್ಶನ ರೈಲು ಉದ್ಘಾಟನೆಯಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ 2 ನ ಕೆಲವು ಫೋಟೊಗಳನ್ನು ಕೆಲ ದಿನಗಳ ಮೊದಲು ನಾನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದೆ. ಆದರೆ ಅಲ್ಲಿ ಹೋಗಿ ನೋಡಿದಾಗ ಫೋಟೊಕ್ಕಿಂತ ಟರ್ಮಿನಲ್ ಚೆನ್ನಾಗಿದೆ. ಇದು ಬೆಂಗಳೂರಿನ ಜನತೆಯ ಹಲವು ಸಮಯದ ಬೇಡಿಕೆಯಾಗಿತ್ತು. ಇಂದು ನಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿದೆ ಎಂದರು.

ವಂದೇ ಭಾರತ್ ಕೇವಲ ರೈಲಲ್ಲ. ಇದು ಹೊಸ ಭಾರತದ ಹೊಸ ಗುರುತಾಗಿದೆ. 21ನೇ ಶತಮಾನದಲ್ಲಿ ಭಾರತದ ರೈಲ್ವೇ ಹೇಗಿರಲಿದೆ ಎನ್ನವುದರ ಪರಿಚಯವಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೇಗೆ ಹೊಸ ರೂಪ ನೀಡುತ್ತಿದ್ದೇವೆ. ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ತೆರಳಿದರೆ ನಮಗೆ ಬೇರೆಯೇ ಪ್ರಪಂಚಕ್ಕೆ ತೆರಳಿದ ಅನುಭವಾಗುತ್ತದೆ. ಹೀಗೆಯೇ ಯಶವಂತಪುರಂ ನಿಲ್ದಾಣದ ಕಾಯಕಲ್ಪಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.

ಕೆಂಪೇಗೌಡರು ಹೇಗೆ ಕಲ್ಪನೆ ಮಾಡಿದ್ದರೋ ಹಾಗೆ ಬೆಂಗಳೂರಿನ ಅಭಿವೃದ್ಧಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಕರ್ನಾಟಕವು ಡಬಲ್ ಇಂಜಿನ್ ಬಲದಲ್ಲಿ ಸಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯಿಂದ ಕರ್ನಾಟಕವೂ ಲಾಭ ಪಡೆಯುತ್ತಿದೆ

ಭಾರತದ ಅಭಿವೃದ್ಧಿಯಲ್ಲಿ ಸಂಪರ್ಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಾಯು ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳನ್ನು ರಚಿಸುವುದು ಸಮಯದ ಅಗತ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಅಭಿವೃದ್ಧಿ ಸಾಧಿಸಲು ನಾವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾಗಿದೆ. ದೇಶದಲ್ಲಿ ಅತ್ಯಾಧುನಿಕ ರೈಲುಗಳ ನಿರ್ಮಾಣವಾಗುತ್ತಿದೆ. 2014ರ ಮೊದಲು ದೇಶದಲ್ಲಿ 70 ಏರ್ ಪೋರ್ಟ್ ಗಳಿದ್ದವು. ಇದೀಗ 140 ಕ್ಕೆ ಏರಿಕೆಯಾಗಿದೆ. ಇದು ವಾಣಿಜ್ಯ ಸೇರಿದಂತೆ ಹಲವು ಕಾರ್ಯಗಳಿಗೆ ಸಹಾಯಕವಾಗುತ್ತದೆ. ದೇಶದ ಏರ್ ಕ್ರಾಫ್ಟ್ ಮತ್ತು ಸ್ಪೇಸ್ ಕ್ರಾಫ್ಟ್ ನಿರ್ಮಾಣದಲ್ಲಿ ಅರ್ಧದಷ್ಟು ಕರ್ನಾಟಕದಲ್ಲೇ ನಡೆಯುತ್ತಿದೆ ಎಂದರು.

ಭಕ್ತಿ ಮತ್ತು ಸಾಮಾಜಿಕ ಶಕ್ತಿಯಿಂದ ಸಮಾಜವನ್ನು ಹೇಗೆ ಒಂದಾಗಿಸಬೇಕು ಎಂದು ಸಂತ ಕನಕದಾಸರು ತೋರಿಸಿಕೊಟ್ಟಿದ್ದಾರೆ. ಕೃಷ್ಣ ಭಕ್ತಿಯೊಂದಿಗೆ ‘ಕುಲ ಕುಲವೆಂದು ಹೊಡೆದಾಡದಿರಿ’ ಎಂದು ಜಾತಿ ವ್ಯವಸ್ತೆಯ ವಿರುದ್ಧ ಅವರು ಸಮಾನತೆಯ ತತ್ವ ಸಾರಿದ್ದರು ಎಂದರು.