ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಬಳಗ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರಿಗೆ ಶುಕ್ರವಾರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಭಿನಂದನೆ ಸಲ್ಲಿಸಿ ಗೌರವ ಸಮರ್ಪಿಸಿತು.
ನಂತರ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ನಾನು ಕಂಪ್ಯೂಟರ್ ಸೈನ್ಸ್ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿ. ಆಗ ಕಂಪ್ಯೂಟರ್ ಸಿಪಿಯುಗೆ 32 ಲಕ್ಷ ಇತ್ತು. ದೊಡ್ಡದಾದ ಮೇನ್ ಫ್ರೇಮ್ ಕಂಪ್ಯೂಟರ್ ಬಳಸುತ್ತಿದ್ದೆವು. ಸಾಕಷ್ಟು ಸವಾಲು ಇತ್ತು. 400 ಜನ ಪರೀಕ್ಷೆ ಬರೆದಿದ್ದರು. ಅದರಲ್ಲಿ ಸಂದರ್ಶನ ಎಲ್ಲಾ ಮುಗಿದು ಅಂತಿಮ ಹಂತಕ್ಕೆ ಆಯ್ಕೆಯಾದ 22 ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ. ಡಿಆರ್’ಡಿಒ ಪ್ರಾಜೆಕ್ಟ್ ಅಡಿ 800 ರೂ. ಫೆಲೋಶಿಪ್ ಪಡೆದು ಕೋರ್ಸ್ ಮುಗಿಸಿದೆ ಎಂದು ಸ್ಮರಿಸಿದರು.
ಡಿಫೆನ್ಸ್ ನಿಂದ ವಿಜ್ಞಾನಿಗಳನ್ನು ಕರೆತರುತ್ತಿದ್ದೆ. ಡಾ.ವಾಸುದೇವನ್, ಡಾ.ಶ್ರೀನಿವಾಸನ್ ಎಲ್ಲರೂ ಪಾಠ ಮಾಡಿ ಹೋಗುತ್ತಿದ್ದರು. ನಾನೇ ಬೈಕ್‌ನಲ್ಲಿ ಅಧ್ಯಾಪಕರನ್ನು ಕರೆದುಕೊಂಡು ಬರುತ್ತಿದ್ದೆ. ನಮಗೆ ಹುದ್ದೆಯೇ ಸೃಷ್ಟಿಯಾಗಿರಲಿಲ್ಲ. 10 ವರ್ಷಗಳ ಕಾಲ ತಾತ್ಕಾಲಿಕ ಹುದ್ದೆಯಲ್ಲೇ ಕಾರ್ಯ ನಿರ್ವಹಿಸಿದೆ. ಆದರೆ, ಪ್ರೊ.ಎಸ್.ಎನ್.ಹೆಗಡೆ ಅವರು ಕುಲಪತಿ ಆಗಿದ್ದಾಗ ನಾನು 10 ವರ್ಷ ಸೇವೆ ಸಲ್ಲಿಸಿದ ಪರಿಣಾಮ ನೇರವಾಗಿ ರೀಡರ್ ಆದೆ. ಅವರು ಅಂದು ಕೊಟ್ಟ ರೀಡರ್ ಹುದ್ದೆಯಿಂದಲೇ ಇಂದು ನಾನು ಕುಲಪತಿ ಆಗಲು ನೆರವಾಯಿತು. ಅದನ್ನು ನಾನೆಂದು ಮರೆಯುವುದಿಲ್ಲ ಎಂದರು.
ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಮಾತನಾಡಿ, ಪ್ರೊ.ಜಿ.ಹೇಮಂತ್ ಕುಮಾರ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ಅವರ ಸಾಧನೆ ಗುರುತಿಸಿ ಯುಕೆ ಎಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಮೈಸೂರು ವಿವಿಯ ಸರ್ವತೋಮುಖ ಬೆಳವಣಿಗೆಗೆ ಕುಲಪತಿಗಳು ಶ್ರಮಿಸಿದ್ದಾರೆ. ಅಂತಾರಾಷ್ಟ್ರಿಯ ಮಟ್ಟಕ್ಕೆ ವಿವಿಯನ್ನು ಕೊಂಡೊಯ್ದಿದ್ದಾರೆ. ಪ್ರೊ.ಜಿ.ಹೇಮಂತ್ ಕುಮಾರ್ ಸರಳ, ಸಜ್ಜನ ವ್ಯಕ್ತಿ. ಇತರರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಅವರಿಗೆ ಎಂದರು.
ಶಾಸಕ ಎನ್.ಮಹೇಶ್, ಪ್ರೊ.ವೆಂಕಟೇಶ್, ಡಾ.ಚೈತ್ರ, ಡಾ.ಸೌಜನ್ಯ, ಡಾ.ಮನೋಹರ್, ಡಾ. ನವೀನ್ ಮೌರ್ಯ ಸೇರಿದಂತೆ ಇತರರು ಇದ್ದರು.