ಮೈಸೂರು: ಇಂದು ಮೈಸೂರಿಗೆ ಮೊದಲ ಬಾರಿಗೆ ಪ್ರಯಾಣಿಕರೊಂದಿಗೆ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಆಗಮಿಸಿದ್ದು, ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರನ್ನು ಬಿಜೆಪಿ ಕಾರ್ಯಕರ್ತರು, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೋದಿ ಹಾಗೂ ಪ್ರತಾಪ್ ಸಿಂಹ ಭಾವಚಿತ್ರ ಹಿಡಿದು ಸ್ವಾಗತಿಸಿದರು.
ಈ ವೇಳೆ, ರೈಲು ಪ್ರಯಾಣ ತುಂಬಾ ಚೆನ್ನಾಗಿದೆ ಎಂದು ಪ್ರಯಾಣಿಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆಯಾದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಮೊದಲ ಪ್ರಯಾಣವನ್ನು ಪ್ರಯಾಣಿಕರೊಂದಿಗೆ ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಟು ಬೆಂಗಳೂರನ್ನು 10 ಗಂಟೆಗೆ ತಲುಪಿ, ಬೆಂಗಳೂರಿನಿಂದ ಮೈಸೂರನ್ನು 12.5 ನಿಮಿಷಕ್ಕೆ ತಲುಪಿದೆ.
ನಿಗದಿಯಾದ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್’ಪ್ರೆಸ್ ಮೈಸೂರು ತಲುಪಿತು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯ ರೈಲಾದ ವಂದೇ ಭಾರತ್ ಎಕ್ಸ್’ಪ್ರೆಸ್, ದೇಶದ ಐದನೇ ಹಾಗೂ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದೆ. ಈ ಎಕ್ಸ್ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದ್ದು, ಆಟೋ’ಮ್ಯಾಟಿಕ್ ತಂತ್ರಜ್ಞಾನದ ಬಾಗಿಲುಗಳು, ವಿಶಿಷ್ಟ ರೀತಿಯ ಆಸನ ವ್ಯವಸ್ಥೆಯನ್ನು ಹೊಂದಿದೆ.