ಮನೆ ರಾಜ್ಯ ಹಿಟ್ಟಿನ ಗಿರಣಿಯ ಬೆಲ್ಟ್’ಗೆ ಸಿಲುಕಿದ ತಾಯಿಯನ್ನು ರಕ್ಷಿಸಿದ ಮಗನಿಗೆ ‘ಹೊಯ್ಸಳ ಶೌರ್ಯ ಪ್ರಶಸ್ತಿ’

ಹಿಟ್ಟಿನ ಗಿರಣಿಯ ಬೆಲ್ಟ್’ಗೆ ಸಿಲುಕಿದ ತಾಯಿಯನ್ನು ರಕ್ಷಿಸಿದ ಮಗನಿಗೆ ‘ಹೊಯ್ಸಳ ಶೌರ್ಯ ಪ್ರಶಸ್ತಿ’

0

ಶನಿವಾರಸಂತೆ(Shanivarasante): ಹಿಟ್ಟಿನ ಗಿರಣಿಯ ಬೆಲ್ಟ್‌’ಗೆ ಸಿಲುಕಿದ ತಾಯಿಯನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿ ಬುದ್ಧಿವಂತಿಕೆ ಮೆರೆದ ಸಮೀಪದ ಕೂಡ್ಲೂರು ಗ್ರಾಮದ ಕೆ.ಆರ್.ದೀಕ್ಷಿತ್‌’ಗೆ ಸರ್ಕಾರ 2021–22ನೇ ಸಾಲಿನ  ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ವರ್ಷದ ಹಿಂದೆ ಕೂಡ್ಲೂರು ಗ್ರಾಮದ ಮನೆಯಲ್ಲಿ ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ತಾಯಿ ಅರ್ಪಿತಾ ಅವರ ತಲೆಕೂದಲು ಸಿಲುಕಿಕೊಂಡು ಆಕೆ ಜೋರಾಗಿ ಕೂಗಿಕೊಂಡರು.

ತಾಯಿ ಕೂಗು ಕೇಳಿ ದೂರದಲ್ಲಿ ಆಟವಾಡುತ್ತಿದ್ದ ಪುತ್ರ ದೀಕ್ಷಿತ್ ಓಡಿ ಬಂದು ಗಿರಣಿಯ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ತಾಯಿ ಪ್ರಾಣವನ್ನು ಉಳಿಸಿದ್ದ.

ಪ್ರಸ್ತುತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿರುವ ದೀಕ್ಷಿತ್ ಓದಿನಲ್ಲೂ ಮುಂದು. ರವಿಕುಮಾರ್– ಅರ್ಪಿತಾ ದಂಪತಿಗೆ ಗಿರಣಿಯ ಬಗ್ಗೆ, ವಿದ್ಯುತ್ ಬಗ್ಗೆ ಏನೂ ತಿಳಿಯದ ಮಗನ ಸಾಹಸ ಹಾಗೂ ಸಮಯ ಪ್ರಜ್ಞೆ ಬಗ್ಗೆ ಬಹಳ ಹೆಮ್ಮೆ. ಬಾಲಕನ ಸಮಯಪ್ರಜ್ಞೆಯನ್ನು ಪರಿಗಣಿಸಿದ ಸರ್ಕಾರ ಆತನಿಗೆ 2021–22ನೇ ಸಾಲಿನಲ್ಲಿ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿತು.

ಈ ಕುರಿತು ಮಾತಾಡಿರುವ  ತಂದೆ ರವಿಕುಮಾರ್ ಮಗನಿಗೆ ಪ್ರಶಸ್ತಿ ಸಿಕ್ಕಿದ ಸಂತೋಷ. ಅದಕ್ಕಿಂತಲೂ ತಾಯಿಯ ಪ್ರಾಣ ಉಳಿಸಿದನೆಂಬ ಹೆಮ್ಮೆ ನಮಗೆ ಜೀವನದುದ್ದಕ್ಕೂ ಇರುತ್ತದೆ. ಈಗ ಗ್ರಾಮಸ್ಥರು, ಶಾಲಾ ಮಕ್ಕಳು ಮಗನ ಹೆಸರು ಹೇಳಿ ನಮ್ಮನ್ನು ಗುರುತಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.