ಮನೆ ಯೋಗಾಸನ ಕುತ್ತಿಗೆ ನೋವು ಕಾಡುತ್ತಿದ್ದರೆ ಈ ಯೋಗಾಸನ ಮಾಡಿ

ಕುತ್ತಿಗೆ ನೋವು ಕಾಡುತ್ತಿದ್ದರೆ ಈ ಯೋಗಾಸನ ಮಾಡಿ

0

ಸಾಮಾನ್ಯವಾಗಿ ಕುಳಿತುಕೊಳ್ಳುವ ಭಂಗಿ ತಪ್ಪಿದ್ದರೆ, ಮಲಗಿದಾಗ ವ್ಯತ್ಯಾಸವಾದರೆ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅಲುಗಾಡಿಸಲೂ ಸಾಧ್ಯವಾಗುವುದಿಲ್ಲ. ಈ ನೋವು ಕುತ್ತಿಗೆ, ಬೆನ್ನು, ಕೈ, ಕಾಲುಗಳವರೆಗೂ ವಿಸ್ತರಿಸುತ್ತದೆ.

ಅತೀವ ನೋವು ನೀಡುವ ಕುತ್ತಿಗೆ ನೋವನ್ನು ನಿವಾರಿಸಲು ಅನೇಕ ಮನೆಮದ್ದುಗಳಿವೆ. ಆದರೆ ಅದು ಮತ್ತೆ ಯಾವಾಗಲಾದರೂ ಕಾಡಬಹುದು. ಹೀಗಾಗಿ ಕುತ್ತಿಗೆ ನೋವಿಗೆ ಉತ್ತಮ ಪರಿಹಾರ ಎಂದರೆ ಯೋಗಾಸನ. ನಿರಂತರ ಯೋಗಾಸನದ ಅಭ್ಯಾಸ ದೇಹದಲ್ಲಿನ ವಿವಿಧ ಭಾಗಗಳ ನೋವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ಹಾಗಾದರೆ ಕುತ್ತಿಗೆ ನೋವನ್ನು ನಿವಾರಿಸಲು ಯಾವೆಲ್ಲ ಯೋಗಾಸನಗಳು ಬೆಸ್ಟ್ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಆಸನಗಳನ್ನು ಮಾಡುವ ಮುನ್ನ ತರಬೇತಿ ಪಡೆದುಕೊಳ್ಳಿ.

ಉಷ್ಟ್ರಾಸನ

ಮುಂಭಾಗದ ಕತ್ತಿನ ಸ್ನಾಯುಗಳಿಗೆ ಉಷ್ಟ್ರಾಸನ ಉತ್ತಮ ವ್ಯಾಯಾಮವಾಗಿದೆ. ಉಷ್ಟ್ರಾಸನವು ಕುತ್ತಿಗೆಯ ಹಿಂಭಾಗದಲ್ಲಿ ಮತ್ತು ಭುಜಗಳ ಉದ್ದಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಸುಲಭವಾಗಿ ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ.

ಮಾಡುವ ವಿಧಾನ

• ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಂತರ ನಿಧಾನವಾಗಿ ಎದ್ದು ಮೊಣಕಾಲುಗಳ ಮೇಲೆ ನಿಂತುಕೊಳ್ಳಿ. ತೊಡೆಗಳನ್ನು ಸಂಪೂರ್ಣವಾಗಿ ನೇರವಾಗಿ ಇರಿಸಿ.

• ದೇಹವನ್ನು ಆದಷ್ಟು ಹಿಂದಕ್ಕೆ ಬಗ್ಗಿಸಲು ಯತ್ನಿಸಿ

• ತಲೆ ಮತ್ತು ಬೆನ್ನನ್ನು ನಿಧಾನವಾಗಿ ಹಿಂದಕ್ಕೆ ಮತ್ತು ಸಾಧ್ಯವಾದಷ್ಟು ಬಗ್ಗಿಸಿ.

• ನಂತರ ಕೈಗಳನ್ನು ಹಿಂದಕ್ಕೆ ಚಾಚಿ ಹಿಮ್ಮಡಿಗೆ ತಾಗಿಸಿ. ಅದೇ ಸ್ಥಿತಿಯಲ್ಲಿ 4 ರಿಂದ 5 ನಿಮಿಷ ಇರಿ. ನಂತರ ನಿಧಾನವಾಗಿ ಆರಾಮದಾಯಕ ಸ್ಥಿತಿಗೆ ಬನ್ನಿ.

ಭುಜಂಗಾಸನ

ಕುತ್ತಿಗೆ ನೋವಿಗೆ ಹೇಳಿ ಮಾಡಿಸಿದ ಆಸನ ಈ ಭುಜಂಗಾಸನ. ಈ ಆಸನವನ್ನು ಸುಲಭವಾಗಿ ಮಲಗಿ ಮಾಡಬಹುದಾಗಿದೆ. ಬೆನ್ನು ನೋವು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನೂ ನಿವಾರಿಸಲು ಈ ಭುಜಂಗಾಸನ ಉತ್ತಮವಾಗಿದೆ.

ಮಾಡುವ ವಿಧಾನ

• ನಿಮ್ಮ ಅಂಗೈಗಳನ್ನು ನೇರವಾಗಿ ನಿಮ್ಮ ಭುಜಗಳ ಕೆಳಗೆ ನೆಲದ ಮೇಲೆ ಇರಿಸಿ. ನಂತರ ಮುಖವನ್ನು ನೇರವಾಗಿರಿಸಿ ಹೊಟ್ಟೆಯ ಮೇಲೆ ಮಲಗಿಕೊಳ್ಳಿ.

• ಬಳಿಕ ನಿಮ್ಮ ಎದೆಯನ್ನು ನೆಲದಿಂದ ಎತ್ತಿ ಹಾಗೂ ಉಸಿರಾಡಿ. ನಿಮ್ಮ ಭುಜಗಳನ್ನು ಹಿಂದಕ್ಕೆ ಬಗ್ಗಿಸಿ. ಕೈಗಳು ನೆಲಕ್ಕೆ ಇರಲಿ.

• ಕುತ್ತಿಗೆಯನ್ನು ಆದಷ್ಟು ಹಿಂದಕ್ಕೆ ಚಾಚಿ ಕಣ್ಣು ನೇರವಾಗಿ ಮೇಲಕ್ಕೆ ನೋಡುತ್ತಿರಲಿ. ನಂತರ ನಿಧಾನವಾಗಿ ಉಸಿರನ್ನು ಬಿಡುತ್ತಾ ಕುತ್ತಿಗೆಯನ್ನು ಕೆಳಕ್ಕೆ ಇಳಿಸಿ. ಇದರಿಂದ ಕಡಿಮೆ ಸಮಯದಲ್ಲಿ ಕುತ್ತಿಗೆ ನೋವನ್ನು ಹೋಗಲಾಡಿಸಬಹುದಾಗಿದೆ.

ಬಾಲಾಸನ

ಕುತ್ತಿಗೆಯ ನೋವನ್ನು ಸುಲಭವಾಗಿ ಹೋಗಲಾಡಿಸಲು ಬಾಲಾಸನ ಸಹಕಾರಿಯಾಗಿದೆ. ಸುಲಭವಾಗಿ ಮಾಡುವ ಈ ಆಸನವು ಕುತ್ತಿಗೆಯ ಮೇಲಿನ ಬಿಗಿ ಹಿಡತನ್ನು ಸಡಿಲಿಸುತ್ತದೆ. ಜೊತೆಗೆ ಆರಾಮದಾಯಕ ಅನುಭವ ನೀಡುತ್ತದೆ.

ಆದರೆ ನೆನಪಿಡಿ ಯೋಗಾಸನಗಳನ್ನು ಮಾಡುವ ಅಭ್ಯಾಸವಿದ್ದರೆ ಮಾತ್ರ ಯಾವುದೇ ರೀತಿಯ ಅನಾರೋಗ್ಯಕ್ಕೆ ಆಸನಗಳನ್ನು ಮಾಡಿ. ಇಲ್ಲವಾದರೆ ಇರುವ ನೋವು ಮತ್ತಷ್ಟು ಜಾಸ್ತಿಯಾಗಬಹುದು.

ಮಾಡುವ ವಿಧಾನ

• ಮೊದಲು ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಂತರ ನಿಧಾನವಾಗಿ ಮುಂದಕ್ಕೆ ಬಾಗಿರಿ.

• ನಂತರ ಕೈಗಳನ್ನು ಮುಂದಕ್ಕೆ ಚಾಚಿ, ತಲೆಯನ್ನು ಬಗ್ಗಿಸಿ. ಆದಷ್ಟು ಹಣೆಯನ್ನು ನೆಲಕ್ಕೆ ತಾಗಿಸಲು ಯತ್ನಿಸಿ.

• ಅದೇ ಸ್ಥಿತಿಯಲ್ಲಿ 5 ನಿಮಿಷ ಇರಿ ನಂತರ ನಿಧಾನವಾಗಿ ತಲೆಯನ್ನು ಮೇಲಕ್ಕೆ ಎತ್ತಿ, ಕೈಗಳನ್ನು ಹಿಂದಕ್ಕೆ ಎಳೆದುಕೊಂಡು ಆರಾಮದಾಯಕ ಸ್ಥಿತಿಗೆ ಬನ್ನಿ.

ಸಲಭಾಸನ

ಈ ಆಸನಗಳು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ, ನಿಮ್ಮ ಬೆನ್ನುಮೂಳೆಯ ಚಲನಶೀಲತೆಯನ್ನು ಸುಧಾರಿಸುತ್ತದೆ. ಇದು ಕುತ್ತಿಗೆ ನೋವನ್ನು ನಿವಾರಿಸಲು ಸಹಾಯಕವಾಗಿದೆ.

ಮಾಡುವ ವಿಧಾನ

• ಮೊದಲು ಹೊಟ್ಟೆಯ ಮೇಲೆ ನೇರವಾಗಿ ಮಲಗಿಗೊಳ್ಳಿ. ನಂತರ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿ.

• ನಂತರ ಮುಖವನ್ನು ಮೇಲಕ್ಕೆ ಎತ್ತಿ. ಅದೇ ಸಮಯದಲ್ಲಿ ಕೈಗಳನ್ನು ಅರ್ಧ ಮೇಲಕ್ಕೆ ಎತ್ತಿ. ನಿಧಾನವಾಗಿ ಅದೇ ಭಂಗಿಯಲ್ಲಿ ಉಸಿರನ್ನು ಬಿಗಿ ಹಿಡಿದುಕೊಳ್ಳಿ.

• ಆ ಬಳಿಕ ಉಸಿರನ್ನು ಬಿಡುತ್ತಾ, ಕೈ ಕಾಲುಗಳನ್ನು ಸಡಿಲಗೊಳಿಸಿ, ಮುಖವನ್ನು ನೆಲಕ್ಕೆ ತಾಗಿಸಿ ಆರಾಮದಾಯಕ ಸ್ಥಿತಿಗೆ ಬನ್ನಿ.