ಮನೆ ಅಪರಾಧ ಕೊಲೆ ಪ್ರಕರಣ: ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌  ಸೇರಿ ನಾಲ್ವರು ಆರೋಪಿಗಳು ಖುಲಾಸೆ

ಕೊಲೆ ಪ್ರಕರಣ: ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌  ಸೇರಿ ನಾಲ್ವರು ಆರೋಪಿಗಳು ಖುಲಾಸೆ

0

ಮುಂಬೈ: 2009ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್‌ ಛೋಟಾ ರಾಜನ್‌ ಹಾಗೂ ಇತರ ಮೂವರು ಆರೋಪಿಗಳನ್ನು ಸಿಬಿಐನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.‌

ಸಾಕ್ಷ್ಯಾಧಾರಗಳ ಕೊರತೆಯಿಂದ ಹಾಗೂ ‘ಸಮಂಜಸ ಅನುಮಾನ’ವನ್ನೂ ಮೀರಿ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದ್ದರಿಂದ ಛೋಟಾ ರಾಜನ್‌ ಹಾಗೂ ಇತರರನ್ನು ವಿಶೇಷ ನ್ಯಾಯಾಧೀಶ ಎ.ಎಂ. ಪಾಟೀಲ್‌ ಅವರು ಖುಲಾಸೆಗೊಳಿಸಿದ್ದಾರೆ.

ಅಲ್ಲದೇ, ‘ಕೊಲೆ ಸಂಚಿನಲ್ಲಿ ರಾಜನ್‌ ಪಾತ್ರವನ್ನು ಸಾಬೀತುಪಡಿಸಲೂ ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಮೊಹಮ್ಮದ್ ಅಲಿ ಶೇಖ್, ಉಮೈದ್ ಶೇಖ್ ಮತ್ತು ಪ್ರಣಯ್ ರಾಣೆ ಖುಲಾಸೆಗೊಂಡ ಇತರ ಮೂವರು.‘2009ರ ಜುಲೈನಲ್ಲಿ ಸಾಹಿದ್‌ ಗುಲಾಮ್‌ ಹುಸೇನ್‌ ಅಲಿಯಾಸ್‌ ಛೋಟೆ ಮಿಯಾ ಎಂಬಾತನನ್ನು ಇಬ್ಬರು ವ್ಯಕ್ತಿಗಳು ದಕ್ಷಿಣ ಮುಂಬೈನ ನಾಗಪಾಡಾದಲ್ಲಿ ಗುಂಡಿಟ್ಟು ಕೊಂದರು. ಅಲ್ಲದೇ, ಕೊಲೆಗಾರರು ಆ ಸ್ಥಳದಿಂದ ತಪ್ಪಿಸಿಕೊಳ್ಳುವ ವೇಳೆಯೂ ಮೂವರನ್ನು ಕೊಂದಿದ್ದರು. ತನಿಖೆಯ ವೇಳೆ, ಪೊಲೀಸರು ಪ್ರಣಯ್‌ ರಾಣೆಯನ್ನು ಬಂಧಿಸಿದ್ದರು. ಈತ ಕೃತ್ಯದಲ್ಲಿ ಭಾಗಿಯಾದ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ’ ಎಂದು ಪ್ರಾಸಿಕ್ಯೂಷನ್‌ ಹೇಳಿದೆ.

ರಾಜನ್‌ ಪ್ರಕರಣದಿಂದ ಖುಲಾಸೆಯಾದರೂ, ಇತರೆ ಹಲವು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವುದರಿಂದ ಈತ ಜೈಲಿನಿಂದ ಹೊರಬರುವುದಿಲ್ಲ. ಹಾಗೆಯೇ, ಪತ್ರಕರ್ತ ಜೆ. ಡೇ ಅವರ ಹತ್ಯೆ ಪ್ರರಕಣಕ್ಕೆ ಸಂಬಂಧಿಸಿದಂತೆ ರಾಜನ್‌ ಶಿಕ್ಷೆ ಅನುಭವಿಸುತ್ತಿದ್ದಾನೆ.