ಮನೆ ರಾಜಕೀಯ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ: ಸಂತೋಷ್ ಲಾಡ್

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ: ಸಂತೋಷ್ ಲಾಡ್

0

ಹುಬ್ಬಳ್ಳಿ: ವಿಪಕ್ಷ ನಾಯಕ‌ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ‌ ಡಿ.ಕೆ. ಶಿವಕುಮಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ. ಇಬ್ಬರು ನಾಯಕರು ರಾಜ್ಯದಾದ್ಯಂತ ಪಕ್ಷ ಸಂಘಟಿಸುವ ಕಾರ್ಯ ಮಾಡಲಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಹೇಳಿದರು.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು,ಇಬ್ಬರು ನಾಯಕರು ಎಲ್ಲೇ ಸ್ಪರ್ಧಿಸಿದರೂ ಗೆಲುವು ಸಾಧಿಸುತ್ತಾರೆ. ಅವರು ಚುನಾವಣೆಗೆ ಸ್ಪರ್ಧಿಸಿದರೆ, ಆಯಾ ಕ್ಷೇತ್ರಕ್ಕಷ್ಟೇ ಸೀಮಿತವಾಗುತ್ತಾರೆ. ಇಡೀ ರಾಜ್ಯ ಸುತ್ತಾಡಿ ಅವರು ಪಕ್ಷ ಸಂಘಟಿಸಬೇಕಿರುವುದರಿಂದ, ಚುನಾವಣೆಯಲ್ಲಿ ಸ್ಪರ್ಧಿಸದಿರುವುದು ಒಳ್ಳೆಯದು. ಅವರು ಹೆಚ್ಚು ಪ್ರಚಾರದಲ್ಲಿ ತೊಡಗಿಕೊಂಡರೆ ಪಕ್ಷದ ಗೆಲುವಿಗೆ ಸಹಕಾರವಾಗುತ್ತದೆ ಎಂದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಬೇಕು. ಅವರಿಗೆ ವಯಸ್ಸಾಗಿರುವುದರಿಂದ, ಚುನಾವಣೆಯೂ ಬೇಸಿಗೆಯಲ್ಲಿ ಬಂದಿರುವುದರಿಂದ‌ ಸ್ಪರ್ಧಿಸದಿರುವುದು ಉತ್ತಮ. ಇದು ನನ್ನ ವೈಯಕ್ತಿಕ‌ ಅಭಿಪ್ರಾಯ. ಚುನಾವಣೆಯಲ್ಲಿ ಸ್ಪರ್ಧಿಸದೆಯೂ ಮುಖ್ಯಮಂತ್ರಿ ಆಗಬಹುದು. ಹೈಕಮಾಂಡ್ ಅವರಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡಬೇಕು ಎಂದು ಹೇಳಿದರು.

ಸಂತೋಷ ಲಾಡ್ ಬಳ್ಳಾರಿಗೆ ಹೋಗ್ತಾರೆ. ನಾ ಕಲಘಟಗಿಯಲ್ಲಿ ಸ್ಪರ್ಧೆಸುತ್ತೇನೆ ಎಂದು ನಾಗರಾಜ ಛಬ್ಬಿ ಅವರು ಸಿದ್ದರಾಮಯ್ಯರಲ್ಲಿ ಹೇಳಿದ್ದಾರೆ. ಈ ವಿಚಾರ ನನಗೆ ಸಿದ್ದರಾಮಯ್ಯ ಹೇಳಿದ್ದಾರೆಯೇ ಹೊರತು, ಬಳ್ಳಾರಿಗೆ ಹೋಗು ಎಂದಿಲ್ಲ. ಕಲಘಟಗಿ ವಿಧಾನಸಭಾ ಕ್ಷೇತ್ರ ಬಿಟ್ಟು ನಾನು ಎಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.

ನಾಗರಾಜ ಛಬ್ಬಿ ಪ್ರತಿ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರ ಹುಡುಕುತ್ತಾರೆ. ಈಗ ಕಲಘಟಗಿ ಕ್ಷೇತ್ರದ ಮೂರು ಹಳ್ಳಿಗೆ ಕುಕ್ಕರ್ ಹಂಚಿಕೆ‌ ಮಾಡಿದ್ದಾರೆ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ‘ಕಲಘಟಗಿ ಕ್ಷೇತ್ರವನ್ನು ಲಾಡ್’ಗೆ ಬಿಟ್ಟುಕೊಟ್ಟೆ’ ಎಂದು ಹೇಳುತ್ತಿರುವುದು ಸರಿಯಲ್ಲ. ಅವರು ಒಮ್ಮೆಯೂ ಅಲ್ಲಿ ಸ್ಪರ್ಧಿಸಿಲ್ಲ. ಎರಡು ಬಾರಿ ಎಂಎಲ್ಸಿ ಆದಾಗಲೂ ಅಭಿವೃದ್ಧಿ‌ ಕೆಲಸ ಮಾಡಿಲ್ಲ. 1977 ರಿಂದ‌ 2008 ರವರೆಗೆ ಒಮ್ಮೆಯೂ ಕಲಘಟಗಿಯಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಅಲ್ಲಿಂದೀಚೆಗೆ ಕಾಂಗ್ರೆಸ್ ಗೆಲುವು ಸಾಧಿಸುತ್ತಿದೆ ಎಂದರು.