ಮನೆ ಪ್ರವಾಸ ಬಾನಾಡಿಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಎಲ್ಲಿಗೆ ಹೋಗಬೇಕು ಗೊತ್ತಾ ?

ಬಾನಾಡಿಗಳ ಅದ್ಭುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಎಲ್ಲಿಗೆ ಹೋಗಬೇಕು ಗೊತ್ತಾ ?

0

ಚಳಿಗಾಲದಲ್ಲಿ ಪಕ್ಷಿ ಪ್ರಿಯರಿಗೆ ಹಬ್ಬ. ಯಾಕೆಂದರೆ, ಈ ಸಂದರ್ಭದಲ್ಲಿ ಸಾಕಷ್ಟು ಅಪರೂಪದ ಪಕ್ಷಿಗಳನ್ನು ನೋಡುವ ಭಾಗ್ಯ ಸಿಗುತ್ತದೆ. ಸಂತಾನೋತ್ಪತ್ತಿ, ಬೆಚ್ಚಗಿನ ಹವಾಮಾನ, ಆಹಾರ ಮೂಲ ಹೀಗೆ ನಾನಾ ಕಾರಣಗಳಿಗಾಗಿ ಸಾಕಷ್ಟು ಪಕ್ಷಿಗಳು ದೂರದೂರಿನಿಂದ ವಲಸೆ ಬರುತ್ತವೆ. ಎಷ್ಟೋ ಕಿಲೋ ಮೀಟರ್’ಗಳಷ್ಟು ದೂರ ಸಾಗಿ ಈ ಹಕ್ಕಿಗಳು ಹೊಸ ಜಾಗವನ್ನು ಹುಡುಕಿಕೊಳ್ಳುತ್ತವೆ. ಈ ಅವಧಿಯಲ್ಲಿ ಪಕ್ಷಿಧಾಮಗಳಿಗೆಲ್ಲಾ ಹೊಸ ಕಳೆ ಬಂದಿರುತ್ತದೆ. ಅಂತೆಯೇ, ಪಕ್ಷಿ ಪ್ರಿಯರನ್ನು ಸೆಳೆಯುವಂತಹ ಭಾರತದ ಇಂತಹ ಸುಂದರ ತಾಣಗಳ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ.

ರಂಗನತಿಟ್ಟು ಪಕ್ಷಿಧಾಮ

ಕರ್ನಾಟಕ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಪಕ್ಷಿಧಾಮಗಳಲ್ಲಿ ರಂಗನತಿಟ್ಟು ಕೂಡಾ ಒಂದು. ಈ ಅದ್ಭುತ ಪಕ್ಷಿಧಾಮಕ್ಕೆ ಭಾರತದಲ್ಲಿಯೇ ಮಹತ್ವದ ಸ್ಥಾನ ಇದೆ. ಕಾವೇರಿ ನದಿಯಲ್ಲಿ ರೂಪುಗೊಂಡ ಚಿಕ್ಕ ಚಿಕ್ಕ ದ್ವೀಪಗಳಲ್ಲಿ ಹಕ್ಷಿಗಳು ನೆಲೆ ಕಂಡುಕೊಳ್ಳುತ್ತವೆ. ಚಳಿಗಾಲದ ಅವಧಿಯಲ್ಲಿ ಸಾಕಷ್ಟು ಅಪರೂಪದ ವಲಸೆ ಹಕ್ಕಿಗಳನ್ನು ಇಲ್ಲಿ ನೋಡಬಹುದು.

ರಂಗನತಿಟ್ಟನ್ನು ಕರ್ನಾಟಕದ ಪಕ್ಷಿ ಕಾಶಿ ಎಂದೂ ಕರೆಯಲಾಗುತ್ತದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದಲ್ಲಿ ಈ ಸುಂದರ ಪಕ್ಷಿಧಾಮವಿದೆ. ನದಿಯ ನಡುವೆ ಇರುವ ಆರು ದ್ವೀಪಗಳಲ್ಲಿ ಇಲ್ಲಿ ಹಕ್ಕಿಗಳನ್ನು ನೋಡಬಹುದು. ಈ ವರ್ಷ ಸಂರಕ್ಷಿತ ರಾಮ್ಸರ್ ಸೈಟ್ ಎಂದೂ ಈ ಪಕ್ಷಿಧಾಮವನ್ನು ಗುರುತಿಸಲಾಗಿದೆ. ಶ್ರೀರಂಗಪಟ್ಟಣದಿಂದ ಸುಮಾರು 3 ಕಿಲೋಮೀಟರ್ ಮತ್ತು ಮೈಸೂರಿನಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿ ಈ ಸುಂದರ ಪಕ್ಷಿಧಾಮವಿದೆ. ಇಲ್ಲಿ ದೋಣಿ ಸವಾರಿಯ ಆನಂದವನ್ನೂ ಅನುಭವಿಸಬಹುದು. ದೋಣಿಯಲ್ಲಿ ಸಾಗುವಾಗ ಮೊಸಳೆಗಳೂ ಕಾಣಸಿಗುತ್ತವೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಚಳಿಗಾಲದ ಸಮಯದಲ್ಲಿ ಪ್ರವಾಸಕ್ಕೆ ಯೋಗ್ಯವಾದ ತಾಣಗಳಲ್ಲಿ ಇದು ಕೂಡಾ ಒಂದು.

ಗ್ರೇಟ್ ರಾನ್ ಆಫ್ ಕಚ್

ಗುಜರಾತಿನಲ್ಲಿ ಗ್ರೇಟ್ ರಾನ್ ಆಫ್ ಕಚ್ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಭಾರತದ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಪ್ರದೇಶ ಇದು. ಇದನ್ನು ಗ್ರೇಟ್ ರಾನ್ ಮತ್ತು ಲಿಟಲ್ ರಾನ್ ಎಂದು ವಿಗಂಡಿಸಲಾಗಿದೆ. ಇದು ಉಪ್ಪು ಜವುಗು ಪ್ರದೇಶ. ಇದೇ ಕಾರಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಉಪ್ಪಿನ ಮರುಭೂಮಿ ನೋಡಲು ಬರುತ್ತಾರೆ. ಆದರೆ, ಈ ಅಪರೂಪದ ಉಪ್ಪಿನ ಮರುಭೂಮಿ ಪಕ್ಷಿ ವೀಕ್ಷಣೆಗೂ ಸೂಕ್ತ ತಾಣ ಕೂಡಾ ಹೌದು. ಯಾಕೆಂದರೆ, ಚಳಿಗಾಲದಲ್ಲಿ ವಲಸೆ ಹಕ್ಕಿಗಳಿಗೆ ಭಾರತದಲ್ಲಿ ಇದು ಕೂಡಾ ಉತ್ತಮ ಆವಾಸ ಸ್ಥಾನವಾಗಿದೆ. ದೀರ್ಘವಾದ ವಲಸೆಯನ್ನು ಮಾಡುವ ಸಾಕಷ್ಟು ಹಕ್ಕಿಗಳು ಗ್ರೇಟ್ ರಾನ್ ಆಫ್ ಕಚ್ ಅನ್ನು ಚಳಿಗಾಲಕ್ಕಾಗಿ ಉತ್ತಮ ನೆಲೆಯನ್ನಾಗಿ ಮಾಡಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಸಾಕಷ್ಟು ಅಪರೂಪದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಅದರಲ್ಲಿ ಹೈಪೋಕೋಲಿಯಸ್ನಂತಹ ಹಕ್ಕಿಗಳೂ ಒಂದು. ಭಾರತದಲ್ಲಿ ಈ ಹಕ್ಕಿಗಳು ಭೇಟಿ ನೀಡುವ ಏಕೈಕ ತಾಣ ಗ್ರೇಟ್ ರಾನ್ ಫ್ ಕಚ್.

ತಾಲ್ ಛಾಪರ್ ಪಕ್ಷಿಧಾಮ

ಪ್ರಮುಖ ಪ್ರವಾಸಿ ಕೇಂದ್ರವಾದ ರಾಜಸ್ಥಾನದಲ್ಲೂ ಅದ್ಭುತ ಪಕ್ಷಿಧಾಮವಿದೆ. ಅದೇ ತಾಲ್ ಛಾಪರ್ ಸಂರಕ್ಷಿತ ಪ್ರದೇಶ. ಸಾಕಷ್ಟು ಅಪರೂಪದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಶೇಖಾವತಿ ಜಿಲ್ಲೆಯ ಚುರುವಿನಿಂದ ಸುಮಾರು 85 ಕಿ.ಮೀ ದೂರದಲ್ಲಿದೆ ಈ ಅಭಯಾರಣ್ಯ. ಇದು ಕೃಷ್ಣಮೃಗ ಮತ್ತು ವಿವಿಧ ಪಕ್ಷಿಗಳ ನೆಲೆಯಾಗಿದೆ. ಚಳಿಗಾಲದಲ್ಲಿ ಪಕ್ಷಿ ವೀಕ್ಷಣೆಗೆ ಇದೊಂದು ಅದ್ಭುತ ತಾಣವಾಗಿದೆ. ಸಾಕಷ್ಟು ಅಪರೂಪದ ಬಾನಾಡಿಗಳು ಇಲ್ಲಿ ಎಲ್ಲರ ಕಣ್ಮನ ಸೆಳೆಯತ್ತವೆ. ಸಾಕಷ್ಟು ವಲಸೆ ಹಕ್ಕಿಗಳಿಗೆ ಇದು ನೆಲೆ. ವಲಸೆ ಹಕ್ಕಿಗಳು ಸೆಪ್ಟೆಂಬರ್ನಲ್ಲಿ ತಾಲ್ ಛಾಪರ್ ಅಭಯಾರಣ್ಯದ ಮೂಲಕ ಹಾದು ಹೋಗುತ್ತವೆ. ಹೀಗೆ ಸಾಗುವ ಸಾಕಷ್ಟು ಹಕ್ಕಿಗಳು ಇಲ್ಲಿಯೇ ಉಳಿದುಕೊಳ್ಳುತ್ತವೆ. ಇದೇ ಕಾರಣದಿಂದ ಚಳಿಗಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ

ಪಶ್ಚಿಮ ಬಂಗಾಳದ ಸುಂದರಬನ್ಸ್ ಉದ್ಯಾನವನ ತನ್ನ ವೈಶಿಷ್ಟ್ಯತೆಯಿಂದಲೇ ಗಮನ ಸೆಳೆದ ತಾಣ. ವಿಶ್ವದ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯವನ್ನು ಹೊಂದಿರುವ ಪ್ರದೇಶ ಇದು. ಇದು ಹುಲಿ ಸಂರಕ್ಷಿತ ಪ್ರದೇಶವಾಗಿಯೂ, ರಾಷ್ಟ್ರೀಯ ಉದ್ಯಾನವನವಾಗಿಯೂ, ವಿಶಿಷ್ಟ ಜೀವವೈವಿಧ್ಯದ ಮೀಸಲಾಗಿಯೂ ಸಾಕಷ್ಟು ಹೆಸರು ಮಾಡಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಈ ಅರಣ್ಯ ಪ್ರದೇಶ ಹರಡಿಕೊಂಡಿದೆ.

ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಲಿಗಳೂ ಇವೆ. ಇಂತಹ ಸುಂದರ ತಾಣ ಚಳಿಗಾಲದಲ್ಲಿ ಪಕ್ಷಿಧಾಮವಾಗಿಯೂ ಗಮನ ಸೆಳೆಯುತ್ತದೆ. ಈ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ವಲಸೆ ಹಕ್ಕಿಗಳನ್ನು ಇಲ್ಲಿ ನೋಡಬಹುದಾಗಿದೆ. ಈ ಸಂದರ್ಭದಲ್ಲಿ ದೋಣಿ ವಿಹಾರ ಇನ್ನಷ್ಟು ಅದ್ಭುತವಾಗಿರುತ್ತದೆ. ದೋಣಿಯಲ್ಲಿ ಸಾಗುತ್ತಾ ವಲಸೆ ಹಕ್ಕಿಗಳ ಸೌಂದರ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. 1987ರಲ್ಲಿ ಈ ತಾಣ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿದ್ದು, 2019ರಿಂದ ಇದನ್ನು ರಾಮ್ಸರ್ ಸೈಟ್ ಎಂದು ಗುರುತಿಸಲಾಗಿದೆ.

ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಅಭಯಾರಣ್ಯ

ತಮಿಳುನಾಡಿನಲ್ಲಿದೆ ಇನ್ನೊಂದು ಸುಂದರ ವನ್ಯಜೀವಿ ಮತ್ತು ಪಕ್ಷಿಧಾಮ. ಅದೇ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮ. ಸಾಕಷ್ಟು ವಲಸೆ ಹಕ್ಕಿಗಳಿಗೆ ಇದು ಆಶ್ರಯ ತಾಣವಾಗಿದೆ. ನಾಗಪಟ್ಟಣಂ ಜಿಲ್ಲೆಯಲ್ಲಿ ಪಕ್ಷಿಗಳನ್ನು ಆಕರ್ಷಿಸುವ ಈ ಸುಂದರ ಪ್ರದೇಶವಿದೆ. ಇಲ್ಲಿ ಫ್ಲೆಮಿಂಗೋಗಳು, ಸ್ಯಾಂಡ್ಪೈಪರ್ಗಳು ಸೇರಿದಂತೆ ಸಾಕಷ್ಟು ಅಪರೂಪದ ಮತ್ತು ವಿದೇಶಿ ಹಕ್ಕಿಗಳನ್ನು ನೋಡಬಹುದು.

ಈ ಅಭಯಾರಣ್ಯ ವರ್ಷಪೂರ್ತಿ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಅಕ್ಟೋಬರ್ನಿಂದ ಜನವರಿವರೆಗೆ ಇಲ್ಲಿ ಪಕ್ಷಿ ವೀಕ್ಷಣೆಗೆ ಉತ್ತಮ ಸಮಯ. ನಾಗಪಟ್ಟಣಂನಿಂದ ಇಲ್ಲಿಗೆ ಸುಮಾರು 55 ಕಿಲೋಮೀಟರ್ ಮತ್ತು ಚೆನ್ನೈನಿಂದ ಸುಮಾರು 380 ಕಿಲೋಮೀಟರ್ ದೂರ ಅಂತರವಿದೆ. ಇಲ್ಲಿಗೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ತಮಿಳುನಾಡಿನ ಕಡೆ ಪ್ರವಾಸಕ್ಕೆ ಹೋಗುವ ಪ್ಲ್ಯಾನ್ನಲ್ಲಿದ್ದರೆ ಇಲ್ಲಿಗೂ ಒಂದು ಸಲ ಭೇಟಿ ನೀಡಬಹುದು.