ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್’ಐ) ಸಂಘಟನೆ ಹಾಗೂ ಅದರ ಮೂವರು ಪದಾಧಿಕಾರಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಶನಿವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ನವೆಂಬರ್ 21ರಂದು ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ಈ ಕುರಿತು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಿಎಫ್’ಐ ದೆಹಲಿ ಘಟಕದ ಅಧ್ಯಕ್ಷ ಪರ್ವೇಜ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ಮತ್ತು ಕಚೇರಿ ಕಾರ್ಯದರ್ಶಿ ಅಬ್ದುಲ್ ಮುಖೀತ್ ಎಂಬುವವರ ಹೆಸರುಗಳು ಆರೋಪಪಟ್ಟಿಯಲ್ಲಿವೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
₹120 ಕೋಟಿ ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದಲ್ಲಿ ಈ ಮೂವರು ಆರೋಪಿಗಳನ್ನು ಸೆಪ್ಟೆಂಬರ್ 22ರಂದು ಬಂಧಿಸಲಾಗಿತ್ತು.ಇವರ ವಿರುದ್ಧ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ದಾಖಲಿಸಿಕೊಂಡಿದ್ದ ಎಫ್ಐಆರ್ ಆಧರಿಸಿ ಇ.ಡಿ. ಕೂಡ ಪ್ರಕರಣ ದಾಖಲಿಸಿಕೊಂಡಿತ್ತು.
ಆರೋಪಿಗಳು ಹವಾಲ, ಬ್ಯಾಂಕ್ ಮೂಲಕ ವರ್ಗಾವಣೆ ಹಾಗೂ ದೇಣಿಗೆಯ ಮೂಲಕ ಹಣ ಸಂಗ್ರಹಿಸಿ ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ವಿನಿಯೋಗಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಇ.ಡಿ. ಆರೋಪಪಟ್ಟಿಯಲ್ಲಿ ಹೇಳಿದೆ.