ಮನೆ ಅಪರಾಧ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಸರಿಯಾಗಿ ಜೋಡಿಸದ ಕಾರಣ ತಪ್ಪಿದ ಭಾರಿ ಅನಾಹುತ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಸರಿಯಾಗಿ ಜೋಡಿಸದ ಕಾರಣ ತಪ್ಪಿದ ಭಾರಿ ಅನಾಹುತ

0

ಮಂಗಳೂರು(Mangalore): ಕುಕ್ಕರ್‌ ಬಾಂಬ್‌’ನ ನಟ್‌ ಬೋಲ್ಟ್‌ ಹಾಗೂ ಸರ್ಕ್ಯೂಟ್‌ ಗಳನ್ನು ಆರೋಪಿಯು ಸರಿಯಾಗಿ ಜೋಡಿಸಿದ ಕಾರಣ ಸ್ಫೋಟದ ತೀವ್ರತೆ ಕಡಿಮೆ ಇತ್ತು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

ಕುಕ್ಕರ್‌ ಬಾಂಬ್‌ ಅನ್ನು ಸರಿಯಾಗಿ ಜೋಡಿಸಿದ್ದರೆ ಆತನೇ ನುಚ್ಚುನೂರಾಗುತ್ತಿದ್ದ. ಇದನ್ನು ರಿಕ್ಷಾದಲ್ಲಿ ಸಾಗಿಸುತ್ತಿದ್ದಾಗ ಅದು ಅರ್ಧಂಬರ್ಧ ಸ್ಫೋಟಗೊಂಡಿದ್ದರಿಂದ ಅನೇಕರ ಪ್ರಾಣ ಹೋಗುವುದು ತಪ್ಪಿತು ಎಂದು ಹೇಳಿದರು.

ಮೊಹಮ್ಮದ್‌ ಶಾರಿಕ್‌ ಕುಕ್ಕರ್‌ ಬಾಂಬ್‌ ಅನ್ನು ಮೈಸೂರಿನಲ್ಲಿಯೇ ತಯಾರಿಸಿದ್ದಾನೆ. ನಗರದಲ್ಲಿ ಬಾಂಬ್ ಸ್ಪೋಟ ನಡೆಸುವ ಉದ್ದೇಶದಿಂದ ಅದನ್ನು ಬಸ್‌’ನಲ್ಲೇ ಮಂಗಳೂರಿಗೆ ಸಾಗಿಸಿದ್ದಾನೆ.  ಮೈಸೂರಿನ ಬಾಡಿಗೆ ಮನೆಯಲ್ಲಿ ನಟ್‌, ಬೋಲ್ಟ್‌, ಸರ್ಕ್ಯೂಟ್‌ಗಳು, ಬ್ಯಾಟರಿಗಳು, ಆಧಾರ್‌ ಕಾರ್ಡ್‌ ಸಿಕ್ಕಿವೆ. 150 ಬೆಂಕಿಪೊಟ್ಟಣಗಳು, ರಂಜಕ, ಗಂಧಕ ಹಾಗೂ ಇತರ ರಾಸಾಯನಿಕಗಳು ಸೇರಿದಂತೆ ಅನೇಕ ಪುರಾವೆಗಳು ಸಿಕ್ಕಿವೆ. ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮೆಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಆಲ್ಯೂಮಿನಿಯಂ ಫಾಯಿಲ್, ಸಿಮ್ ಕಾರ್ಡ್‌ಗಳನ್ನೂ ಅಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಬಾಂಬ್‌ ತಯಾರಿಸುತ್ತಿದ್ದ ವಿಷಯ ಮನೆಯ ಮಾಲೀಕ ಮೋಹನ್‌ ಕುಮಾರ್‌’ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಆಟಿಕೆಯ ಕೋವಿಯೂ ಪತ್ತೆಯಾಗಿದೆ. ಅದನ್ನೇಕೆ ಇಟ್ಟುಕೊಂಡಿದ್ದ ತಿಳಿದಿಲ್ಲ ಎಂದರು.

ಆರೋಪಿ ಶಾರಿಕ್‌ ಬಿ.ಕಾಂ. ಪದವೀಧರ. ಕುಕ್ಕರ್‌ ಬಾಂಬ್‌ ತಯಾರಿ ಬಗ್ಗೆ ಸಂಪೂರ್ಣ ಪರಿಣತಿ ಆತನಿಗೆ ಇದ್ದಂತೆ ತೋರುತ್ತಿಲ್ಲ. ಅವನು ಸ್ವತಃ ಮೊಬೈಲ್‌’ಗಳ ಕುರಿತು ತರಬೇತಿ ನೀಡುವವ. ಹಾಗಾಗಿ ಆತ ಮೊಬೈಲ್‌ ನೋಡಿಯೂ ಕಲಿತಿರಬಹುದು. ಆದರೆ ಅವನು ಅಂದುಕೊಂಡಿದ್ದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಆತನಿಗೆ ಸಾಧ್ಯವಾಗಿಲ್ಲ ಎಂದು ಎಡಿಜಿಪಿ ತಿಳಿಸಿದರು.

ಪಿಎಫ್‌’ಐ ನಿಷೇಧ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಯೋತ್ಪಾದನಾ ಕೃತ್ಯ ನಡೆಸಲಾಗುತ್ತಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ತನಿಖೆಯ ಬಳಿಕವಷ್ಟೇ ಈ ಬಗ್ಗೆ ಮಾಹಿತಿ ನೀಡಬಹುದು. ನಗರಕ್ಕೆ ಮುಖ್ಯಮಂತ್ರಿ ಭೇಟಿಗೂ ಈ ಘಟನೆಗೂ ಸಂಬಂಧ ಇದ್ದಂತೆ ತೋರುತ್ತಿಲ್ಲ.ಆರೋಪಿ ನ.10ರಂದು ನಗರಕ್ಕೆ ಬಂದು ಹೋಗಿದ್ದ. ಆತ ಬಾಂಬ್‌ ಇಡಲು ಸ್ಥಳ ನೋಡಿ ಹೋಗಿರಬಹುದು ಎಂದರು.

ಸದ್ಯಕ್ಕೆ ಕರ್ನಾಟಕದ ಪೊಲೀಸರೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ವಿವಿಧ ತನಿಖಾ ಏಜೆನ್ಸಿಗಳ ನೆರವನ್ನೂ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.