ಮನೆ ರಾಜ್ಯ ಉದ್ರಿಕ್ತರು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಅಂಗಿ ಹರಿದಿಲ್ಲ: ಪ್ರತ್ಯಕ್ಷದರ್ಶಿಗಳು

ಉದ್ರಿಕ್ತರು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಅಂಗಿ ಹರಿದಿಲ್ಲ: ಪ್ರತ್ಯಕ್ಷದರ್ಶಿಗಳು

0

ಚಿಕ್ಕಮಗಳೂರು(Chikkamagaluru): ಮೂಡಿಗೆರೆ ತಾಲ್ಲೂಕಿನ ಹುಲ್ಲೆಮನೆ– ಕುಂದೂರಿನಲ್ಲಿ ಭಾನುವಾರ ಆನೆ ದಾಳಿಯಿಂದ ಸಾವಿಗೀಡಾದ ಶೋಭಾ ಅವರ ಮೃತದೇಹ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತಡವಾಗಿ ಬಂದಿದ್ದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಅಂಗಿಯನ್ನು ಉದ್ರಿಕ್ತರು ಹರಿದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಕುಮಾರಸ್ವಾಮಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿಯಬಿಟ್ಟು ‘ಪತಿಭಟನಾ ಸ್ಥಳದಲ್ಲಿ ಹಲ್ಲೆ ನಡೆಸಿ ಅಂಗಿ ಹರಿದರು’ ಎಂದು ಆರೋಪಿಸಿರುವುದನ್ನು ಗ್ರಾಮಸ್ಥರು ಅಲ್ಲಗಳೆದರು.

ಕುಮಾರಸ್ವಾಮಿ ಅವರು ತಡವಾಗಿ ಸ್ಥಳಕ್ಕೆ ಬಂದಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. ತಳ್ಳಾಟ ನೂಕಾಟವಾಯಿತು. ಕೆಲವರು ಕಲ್ಲು ತೂರಿದರು. ಅವರ ಕಡೆಗೆ ಹೂವಿನ ಹಾರ ಎಸೆದರು ಎಂದು ಪ್ರತಿಭಟನಾ ಸ್ಥಳದಲ್ಲಿದ್ದವರು ತಿಳಿಸಿದರು.

ಶಾಸಕ ಕುಮಾರಸ್ವಾಮಿ ಅವರನ್ನು ಪೊಲೀಸರೇ ಕರೆದುಕೊಂಡು ಹೋಗಿ ಜೀಪಿಗೆ ಕೂರಿಸಿದರು. ಆಗ ಅವರ ಅಂಗಿ ಚೆನ್ನಾಗಿತ್ತು. ಜೀಪಿಗೆ ಕೂರಿಸಿದ ವಿಡಿಯೊಗಳು ಇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌, ಗ್ರಾಮಸ್ಥ ಅಣ್ಣೇಗೌಡ, ಶಿವಕುಮಾರ್‌ ತಿಳಿಸಿದರು.

ಪುತ್ರನಿಗೆ ಉದ್ಯೋಗಕ್ಕೆ ಮನವಿ: ಮೃತ ಶೋಭಾ ಪತಿ ಸತೀಶ್‌ ಮಾತನಾಡಿ, ಈ ಭಾಗದಲ್ಲಿ ಆನೆಗಳ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಗ್ರಾಮ ಪ್ರದೇಶದ ಸುತ್ತ ಬೇಲಿ ನಿರ್ಮಿಸುವಂತೆ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಪುತ್ರನಿಗೆ ಸರ್ಕಾರಿ ಉದ್ಯೋಗ ಮತ್ತು ₹ 50 ಲಕ್ಷ ಪರಿಹಾರ ನೀಡುವಂತೆ ಕೋರಿದ್ದೇವೆ. ₹ 15 ಲಕ್ಷ ಪರಿಹಾರ ಕೊಡಿಸುವುದಾಗಿ ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಅರಣ್ಯ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ದೂರಿನ ಮೇರೆಗೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ.

ಶಾಸಕರ ಆರೋಪವೇನು ?

ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಘಟನಾ ಸ್ಥಳಕ್ಕೆ ತೆರಳಿದ್ದಾಗ ಉದ್ರಿಕ್ತರು ದರೋಡೆಕೋರನ ರೀತಿಯಲ್ಲಿ ಅಟ್ಟಿಸಿಕೊಂಡು ಬಂದರು. ಪೊಲೀಸರ ಬಳಿ ವಿಡಿಯೋಗಳು ಇವೆ. ಇಬ್ಬರು ಮಹಿಳೆಯರು ಅಂಗಿ ಹಿಡಿದು ಎಳೆದು ಹರಿದರು ಎಂದರು.