ಮನೆ ಸುದ್ದಿ ಜಾಲ ಮಹಿಳೆಯರಲ್ಲಿ ಆರ್ಥಿಕ ಪ್ರಜ್ಞಾವಂತಿಕೆ ಬೆಳೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಜಿ.ಟಿ.ದೇವೇಗೌಡ

ಮಹಿಳೆಯರಲ್ಲಿ ಆರ್ಥಿಕ ಪ್ರಜ್ಞಾವಂತಿಕೆ ಬೆಳೆಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಜಿ.ಟಿ.ದೇವೇಗೌಡ

0

ಮೈಸೂರು(Mysuru): ಮಹಿಳೆಯರನ್ನು ಜಾಗೃತಿಗೊಳಿಸಿ ಆರ್ಥಿಕ ಪ್ರಜ್ಞಾವಂತಿಕೆಯನ್ನು ಬೆಳೆಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ತಾಲ್ಲೂಕು ಜಯಪುರ ಹೋಬಳಿ ದಾರಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಏರ್ಪಡಿಸಿದ್ದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸಾಧನ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಕಳೆದ 12 ವರ್ಷಗಳಲ್ಲಿ ಮೈಸೂರು ಜಿಲ್ಲೆಯಲ್ಲಿ 17,610 ಸ್ವಸ್ವಹಾಯ ಸಂಘಗಳ ಮೂಲಕ 1,58,000 ಮಹಿಳೆಯರು ಸ್ವಾವಲಂಬಿ ಬದುಕು ಕಂಡುಕೊಂಡು, ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದ್ದಾರೆ ಎಂದು ತಿಳಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲೆಯಲ್ಲಿ ಕಾರ್ಯಾರಂಭಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವ ಸಹಾಯ ಸಂಘಗಳ ಮೂಲಕ ಹಲವಾರು ಮಂದಿ ಉತ್ತಮ ಬದುಕನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಧೃಢರಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದರ ಜೊತೆಗೆ ವ್ಯವಹಾರದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಸಂಸ್ಥೆಯಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹೆಚ್ಚಿನ ದಾಖಲೆಗಳ ಜಂಜಾಟವಿಲ್ಲ, ಕಡಿಮೆ ಬಡ್ಡಿ ದರದಲ್ಲಿ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಸಾಲ ಪಡೆಯಬಹುದಾಗಿದೆ. ಹೀಗಾಗಿ ಸಣ್ಣ-ಪುಟ್ಟ ವ್ಯಾಪಾರ ಆರಂಭಿಸಿ, ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳಿಸಬೇಕೆಂಬ ಕನಸು ಕಾಣುವ ಬಡ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಭರವಸೆ ಬೆಳಕಾಗಿದೆ ಎಂದರು.

ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ, ದಾರಿಪುರ ಗ್ರಾಮದ ಬಸವಣ್ಣ, ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ, ಬರಡನಪುರ ಬಸವಣ್ಣ, ಸದಸ್ಯರುಗಳು, ಮುಖಂಡರುಗಳು ಭಾಗವಹಿಸಿದ್ದರು.