ಮನೆ ಕಾನೂನು ಮನೆ ನಿರ್ಮಿಸದೇ ಕೈಕೊಟ್ಟ ಬಿಲ್ಡರ್: ಬಡ್ಡಿ ಸಮೇತ ಹಣ ವಾಪಾಸಾತಿಗೆ ಗ್ರಾಹಕರ ಆಯೋಗ ಆದೇಶ

ಮನೆ ನಿರ್ಮಿಸದೇ ಕೈಕೊಟ್ಟ ಬಿಲ್ಡರ್: ಬಡ್ಡಿ ಸಮೇತ ಹಣ ವಾಪಾಸಾತಿಗೆ ಗ್ರಾಹಕರ ಆಯೋಗ ಆದೇಶ

0

ಧಾರವಾಡ: ಮನೆ ನಿರ್ಮಿಸಿಕೊಡುತ್ತೇನೆ ಎಂದು ಮುಂಗಡ ಹಣ ಪಡೆದು ಮನೆ ಕಟ್ಟಿಕೊಡದ ಬಿಲ್ಡರ್’ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಭಾರೀ ದಂಡ ವಿಧಿಸಿದೆ.

ದೂರುದಾರರಿಂದ ಪಡೆದ ಮುಂಗಡ ಹಣ 13 .95 ಲಕ್ಷ ರೂಪಾಯಿಗಳನ್ನು ಬಡ್ಡಿ ಸಮೇತ ನೀಡುವಂತೆ ಆದೇಶದಿದ್ದು, ಜೊತೆಗೆ ಮಾನಸಿಕ ತೊಂದರೆ ಹಾಗೂ ಪ್ರಕರಣದ ಖರ್ಚು ವೆಚ್ಚವಾಗಿ 1.10 ಲಕ್ಷ ರೂ. ಅನ್ನು ದೂರುದಾರರಿಗೆ ಬಿಲ್ಡರ್ ನೀಡಬೇಕೆಂದು ಸೂಚಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಪರಮೇಶ್ವರ ವಿಘ್ನೇಶ್ವರ ಭಟ್ ಎಂಬುವವರು ಧಾರವಾಡದ ವೀರಭದ್ರೇಶ್ವರ ಇನ್ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈವೆಟ್ ಲಿಮಿಟೆಡ್ ಜೊತೆ ಮನೆ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿಯ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿರವರ ಜೊತೆ ಪೂರ್ಣಿಮಾ ಲೇಔಟ್’ನಲ್ಲಿ 1200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ಪರಮೇಶ್ವರ ವಿಶ್ವೇಶ್ವರ ಭಟ್ 2007ರ ಫೆಬ್ರವರಿ 5ರಂದು ಒಪ್ಪಂದ ಮಾಡಿಕೊಂಡಿದ್ದರು.

ಒಟ್ಟು 16.86 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಂಡು 13.95 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿದ್ದರು. ಮುಂಗಡ ಹಣಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತನಗೆ ಮನೆ ನಿರ್ಮಾಣ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಪರಮೇಶ್ವರ ವಿಘ್ನೇಶ್ವರ ಭಟ್ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಮನೆ ಕಟ್ಟಿಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ಪ್ರೈವೆಟ್ ಲಿಮಿಟೆಡ್ ಆಡಳಿತಗಾರ ಎನ್ಎಸ್ ನೀರಲಗಿ ದೂರುದಾರರಿಂದ ಪಡೆದ 13.95 ಲಕ್ಷ ರೂ.ಗಳನ್ನು 2015 ಜೂನ್ 4ರಿಂದ ಶೇ.9ರಂತೆ ಬಡ್ಡಿ ಸಮೇತ ನೀಡಬೇಕು ಎಂದು ಆದೇಶಿಸಿದ್ದು, ಮಾನಸಿಕ ತೊಂದರೆಗೆ 1 ಲಕ್ಷ ರೂ. ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ 10 ಸಾವಿರ ರೂ.ಗಳನ್ನು ಈ ಆದೇಶದ ದಿನಾಂಕದಿಂದ ತಿಂಗಳ ಒಳಗಾಗಿ ನೀಡುವಂತೆ ಆಯೋಗ ತೀರ್ಪು ನೀಡಿದೆ.