ಮನೆ ಅಪರಾಧ 2 ವರ್ಷಗಳ ಹಿಂದೆಯೇ ಶ್ರದ್ಧಾಗೆ ತುಂಡು ತುಂಡು ಮಾಡುವುದಾಗಿ ಬೆದರಿಸಿದ್ದ ಅಫ್ತಾಬ್

2 ವರ್ಷಗಳ ಹಿಂದೆಯೇ ಶ್ರದ್ಧಾಗೆ ತುಂಡು ತುಂಡು ಮಾಡುವುದಾಗಿ ಬೆದರಿಸಿದ್ದ ಅಫ್ತಾಬ್

0

ನವದೆಹಲಿ: ಅಫ್ತಾಬ್‌ ಪೂನಾವಾಲ ನನ್ನನ್ನು ಕೊಂದು ತುಂಡು ತುಂಡು ಮಾಡಿ ಎಸೆಯುವುದಾಗಿ ಬೆದರಿಕೆ ಹಾಕಿದ್ದ ಎಂದು ಶ್ರದ್ಧಾ ವಾಲ್ಕರ್‌ ಸರಿಯಾಗಿ ಎರಡು ವರ್ಷಗಳ ಹಿಂದೆ ನವೆಂಬರ್ 23 ರಂದು ಮಹಾರಾಷ್ಟ್ರದ ವಾಸೈನ ತಿಲುಂಜ್‌ ಪೊಲೀಸ್ ಸ್ಟೇಷನ್’​ಗೆ ಲಿಖಿತ ದೂರೊಂದನ್ನು ನೀಡಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈ ದೂರಿಗೆ ಪೊಲೀಸರ ಸ್ವೀಕೃತಿ ಮುದ್ರೆ ಕೂಡ ಇದೆ. ಪೊಲೀಸರು ಈ ದೂರಿನ ಕುರಿತು ಆಗಲೇ ತನಿಖೆ ನಡೆಸಿದ್ದರು. ಆದರೆ ‘ನಮ್ಮ ನಡುವೆ ಯಾವುದೇ ಜಗಳ ಇಲ್ಲ‘ ಎಂದು ಶ್ರದ್ಧಾ ದೂರನ್ನು ಹಿಂಪಡೆದಿದ್ದರು.

ಈ ಪ‍ತ್ರದಲ್ಲಿ ಅಫ್ತಾಬ್ ತನ್ನನ್ನು ಕೊಂದು, ತುಂಡು ತುಂಡು ಮಾಡಿ ಎಸೆಯುವ ಬೆದರಿಕೆ ಹಾಕಿದ್ದ ಎಂದು ಶ್ರದ್ಧಾ ಹೇಳಿದ್ದರು.

ಅಫ್ತಾಬ್‌ನ ಹಿಂಸಾತ್ಮಕ ನಡವಳಿಕೆ ಬಗ್ಗೆ ಮನೆಯವರ ಗಮನಕ್ಕೂ ಬಂದಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ತನ್ನ ಸಹೋದ್ಯೋಗಿ ಕರಣ್ ಎಂಬವರೊಂದಿಗೆ ಶ್ರದ್ಧಾ ಹಂಚಿಕೊಂಡಿದ್ದರು. ಅಫ್ತಾಬ್‌ ಹಲ್ಲೆಯಿಂದ ಉಂಟಾದ ಗಾಯದ ಫೋಟೋವನ್ನೂ ಕಳುಹಿಸಿದ್ದರು. ಅಲ್ಲದೇ ‘ಆಂತರಿಕ ಗಾಯ‘ದಿಂದಾಗಿ ಒಂದು ವಾರ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು ಎನ್ನುವುದು ತನಿಖಾಧಿಕಾರಿಗಳು ನೀಡಿದ ಮಾಹಿತಿ.

ಇವತ್ತು ನನ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಪ‍್ರಯತ್ನ ಮಾಡಿದ. ನನ್ನನ್ನು ಕೊಲೆ ಮಾಡಿ, ತುಂಡು ತುಂಡು ಮಾಡಿ ಎಸೆಯುತ್ತೇನೆ ಎಂದು ಬೆದರಿಕೆ ಹಾಕಿದ. ನನ್ನ ಮೇಲೆ ಆತ ಹಲ್ಲೆ ಮಾಡಲು ಶುರು ಮಾಡಿ ಆರು ತಿಂಗಳು ಆಯ್ತು. ನನ್ನನ್ನು ಕೊಲೆ ಮಾಡುತ್ತೇನೆ ಎಂದು ಅವನು ಬೆದರಿಕೆ ಹಾಕಿದ್ದರಿಂದ ನನಗೆ ಪೊಲೀಸ್‌ ದೂರು ನೀಡಲು ಭಯ ಆಗಿತ್ತು ಎಂದು ಶ್ರದ್ಧಾ ಕರಣ್‌’ರೊಂದಿಗೆ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗಿನ ಪೊಲೀಸ್ ತನಿಖಾಧಿಕಾರಿಯು ಶ್ರದ್ಧಾ ಮತ್ತು ಅಫ್ತಾಬ್ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹೋಗಿ ವಿಚಾರಣೆ ನಡೆಸಿದ್ದರು. ಆದರೆ ದೂರನ್ನು ಮುಂದುವರಿಸಲು ಬಯಸುತ್ತಿಲ್ಲ ಎಂದು ಆಗ ಶ್ರದ್ಧಾ ಹೇಳಿದ್ದಳು ಎಂದು ವರದಿ ತಿಳಿಸಿವೆ.

ಆಕೆ ತನ್ನ ಹಿಂದಿನ ದೂರನ್ನು ಹಿಂದೆಗೆದುಕೊಳ್ಳುವ ಪತ್ರವನ್ನು ನೀಡಿದ್ದರಿಂದ, ಪ್ರಕರಣವನ್ನು ಮುಂದುವರಿಸುವಂತೆ ಒತ್ತಾಯಿಸಲು ಅಥವಾ ಬಲವಂತವಾಗಿ ಆಕೆಯ ಮನೆಗೆ ಪ್ರವೇಶಿಸಲು ಸಾಧ್ಯವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

2019ರಲ್ಲಿ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಿತರಾಗಿದ್ದ ಅಫ್ತಾಬ್ ಹಾಗೂ ಶ್ರದ್ದಾ, 2020ರ ಗಲಾಟೆ ಬಳಿಕವೂ ಒಟ್ಟಿಗೆ ಇದ್ದರು. ಈ ವರ್ಷದ ಆರಂಭದಲ್ಲಿ ದೆಹಲಿಗೆ ಸ್ಥಳಾಂತರವಾಗಿದ್ದರು.