ಮನೆ ಸುದ್ದಿ ಜಾಲ ದೇಗುಲ, ಮಸೀದಿ, ಚರ್ಚ್ ಆಯಾ ಸಮುದಾಯಕ್ಕೆ ಸೀಮಿತವಲ್ಲ, ಎಲ್ಲರಿಗೂ ಸೇರಿದ್ದು: ಡಾ.ಶೆಲ್ವಪಿಳ್ಳೆ ಅಯ್ಯಂಗಾರ್‌

ದೇಗುಲ, ಮಸೀದಿ, ಚರ್ಚ್ ಆಯಾ ಸಮುದಾಯಕ್ಕೆ ಸೀಮಿತವಲ್ಲ, ಎಲ್ಲರಿಗೂ ಸೇರಿದ್ದು: ಡಾ.ಶೆಲ್ವಪಿಳ್ಳೆ ಅಯ್ಯಂಗಾರ್‌

0

ಮೈಸೂರು(Mysuru): ದೇಗುಲ, ಮಸೀದಿ, ಚರ್ಚ್‌ ಸೇರಿದಂತೆ ಯಾವುದೇ ಸ್ಮಾರಕ ಕೇವಲ ಆಯಾ ಸಮುದಾಯಗಳಿಗೆ ಮಾತ್ರ ಸೀಮಿತವಲ್ಲ. ಅವು ಎಲ್ಲರಿಗೂ ಸೇರಿದ್ದು ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್‌ ಅಭಿಪ್ರಾಯಪಟ್ಟರು.

ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಗುರುವಾರ ಆಯೋಜಿಸಿದ್ದ ‘ವಿಶ್ವ ಪಾರಂಪರಿಕ ಸಪ್ತಾಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀರಂಗಪಟ್ಟಣದ ದರಿಯಾದೌಲತ್‌, ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್, ಹಳೇಬೇಡಿನ ಹೊಯ್ಸಳೇಶ್ವರ ದೇಗುಲ ಎಲ್ಲವೂ ನಮ್ಮವೇ. ಅವುಗಳನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಯಾರಾದರೂ ಕಿಡಿಗೇಡಿಗಳು ಪಾರಂಪರಿಕ ಕಟ್ಟಡಗಳ ಸ್ವರೂಪ ಹಾಳು ಮಾಡುತ್ತಿದ್ದರೆ, ಹೆಸರು ಬರೆದು ವಿಕೃತಿ ಮೆರೆಯುತ್ತಿದ್ದರೆ ಪ್ರಶ್ನಿಸಬೇಕು ಎಂದರು.

ಯುನೆಸ್ಕೋ ಘೋಷಿಸಿರುವ 40 ವಿಶ್ವ ಪಾರಂಪರಿಕ ತಾಣಗಳು ದೇಶದಲ್ಲಿವೆ. ‍ಭಾರತವನ್ನೇ ವಿಶ್ವ ಪಾರಂಪರಿಕ ತಾಣವಾಗಿ ಮಾಡುವಷ್ಟು ಐತಿಹಾಸಿಕ ಸ್ಥಳಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಪಾಕಿಸ್ತಾನ, ಅಫ್ಗಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಸಾವಿರಾರು ಪಾರಂಪರಿಕ ಸ್ಥಳಗಳಿದ್ದು, ಐತಿಹಾಸಿಕ ಮಹತ್ವವನ್ನು ಯಾರೂ ಮರೆಯಬಾರದು ಎಂದು ಹೇಳಿದರು.

ವಿಶ್ವ ಪಾರಂಪರಿಕ ತಾಣವೆಂದು ಘೋಷಣೆಯಾದರೆ ಯುನೆಸ್ಕೋ ನಿಯಮಾವಳಿ ‍ಪಾಲಿಸಬೇಕು. ಮೇಲುಕೋಟೆ, ನಂಜನಗೂಡಿನಂತ ಪಾರಂಪರಿಕ ಊರುಗಳಲ್ಲಿ ಮನೆ ದುರಸ್ತಿ ಮಾಡಬೇಕೆಂದರೆ ಅನುಮತಿ ಬೇಕು. ಅದನ್ನು ಸಮಸ್ಯೆಯೆಂದು ಭಾವಿಸಬಾರದು ಎಂದು ತಿಳಿಸಿದರು.

ಸ್ಮಾರಕಗಳ ನಿರ್ವಹಣೆಗೆ ನವ ಮಾಧ್ಯಮ ಬಳಸಿ: ಆಧುನಿಕ ಕಟ್ಟಡವಾದರೂ ನಿರ್ವಹಣೆ ಮಾಡದಿದ್ದರೆ ಶಿಥಿಲಗೊಳ್ಳುತ್ತದೆ. 100 ವರ್ಷದ ಮಹಾರಾಣಿ ಕಾಲೇಜು ಕಟ್ಟಡ ಶಿಥಿಲಗೊಂಡು ನಮ್ಮ ಕಣ್ಣೆದುರೇ ಒಂದು ಭಾಗ ಬಿದ್ದಿದೆ. ಹೀಗಾಗಿ ನಿರ್ವಹಣೆ ಉತ್ತಮವಾಗಿ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಾಗಿ ಟ್ವಿಟರ್, ಫೇಸ್‌’ಬುಕ್‌, ಇನ್‌’ಸ್ಟಾಗ್ರಾಮ್‌ ಸೇರಿದಂತೆ ನವಮಾಧ್ಯಮಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು, ಟೆರಿಷಿಯನ್‌ ಕಾಲೇಜು, ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್‌ ಆಫ್ ಡಿಸೈನ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲಾಖೆಯ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದರು.

ಮಾನಸಗಂಗೋತ್ರಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ಬ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ,  ಇತಿಹಾಸ ತಜ್ಞರಾದ ಡಾ.ಎನ್‌.ಎಸ್‌.ರಂಗರಾಜು, ಡಾ.ಎಚ್‌.ಎಂ.ಸಿದ್ದನಗೌಡರ್, ಇಲಾಖೆಯ ಉಪನಿರ್ದೇಕರಾದ ಸಿ.ಎನ್‌.ಮಂಜುಳಾ, ಎಂಜಿನಿಯರ್‌ ಸಿ.ಟಿ.ಮಹೇಶ ಇದ್ದರು.