ಮನೆ ಸುದ್ದಿ ಜಾಲ ವಿದ್ಯಾರ್ಥಿಗಳು ಚುನಾವಣಾ ರಾಯಭಾರಿಗಳು : ಡಾ.ಕೆ.ವಿ.ರಾಜೇಂದ್ರ

ವಿದ್ಯಾರ್ಥಿಗಳು ಚುನಾವಣಾ ರಾಯಭಾರಿಗಳು : ಡಾ.ಕೆ.ವಿ.ರಾಜೇಂದ್ರ

0

ಮೈಸೂರು(Mysuru): ಅರ್ಹ ಯುವಕ ಯುವತಿಯರು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸುವ ಮೂಲಕ ಹಾಗೂ ತಮ್ಮ ಕುಟುಂಬ ಹಾಗೂ ನೆರೆಹೊರೆಯವರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಜಾಗೃತ ಮತದಾರರಾಗೋಣ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಕರೆ ನೀಡಿದರು.


ಇಂದು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಯುವ ಮತದಾರರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಹಿಂದೆ 2023 ರ ಜನವರಿ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಬೇಕಾಗಿತ್ತು. ಆದರೆ ಈಗ 17+ ವರ್ಷ ತುಂಬಿದವರು ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ನವ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದರು.


 ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಅರ್ಹ ನವ ಮತದಾರರಿದ್ದು, ಇವರಲ್ಲಿ ಕೇವಲ 17 ಸಾವಿರ ಮಾತ್ರ ನೋಂದಣಿಯಾಗಿದ್ದಾರೆ. ಉಳಿದವರನ್ನು ನೋಂದಣಿ ಮಾಡಿಸಲು ಮತದಾರರ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಮತಗಟ್ಟೆ ಅಧಿಕಾರಿಗಳ ಬಳಿ ಅಥವಾ ವೋಟರ್ ಹೆಲ್ಪ್’ಲೈನ್ ಆಪ್ ( VHA ) ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ತಮ್ಮ ಮೊಬೈಲ್‌ನಲ್ಲಿ ವೋಟರ್ ಹೆಲ್ಪ್ಲೈನ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಇದರಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೆ ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರು ಕನಿಷ್ಟ 20 ನವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಹಾಗೂ ಮರಣ ಹೊಂದಿರುವ ಕನಿಷ್ಟ 5 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಹಾಗೆ ನೋಡಿಕೊಳ್ಳಿ ಎಂದು ತಿಳಿಸಿದರು.
ಪ್ರತಿ ಭಾನುವಾರ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮರಣ ಹೊಂದಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವರು. ಮತಗಟ್ಟೆ ಅಧಿಕಾರಿಗಳ ಬಳಿ ಕರಡು ಮತದಾರರ ಪಟ್ಟಿ ಇದ್ದು, ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಿ. 40% ಗಿಂತ ಹೆಚ್ಚಿನ ವಿಕಲತೆ ಹೊಂದಿದವರಿಗೆ ಚುನಾವಣೆಯಲ್ಲಿ ಮತದಾನ ಮಾಡಿಸಲು ನೇರವಾಗಿ ಮನೆಗೆ ಹೋಗಿ ಮತದಾನ ಮಾಡಿಸುವ ವ್ಯವಸ್ಥೆ ಬರಲಿರುವುದರಿಂದ ವಿಕಲತೆಯ ಮಾಹಿತಿಯನ್ನು ನೋಂದಣಿ ಮಾಡಿ ಎಂದು ತಿಳಿಸಿದರು.
‘ನನ್ನ ಒಂದು ಮತದಾನದಿಂದ ಬದಲಾವಣೆ ಅಸಾಧ್ಯ’ ಎಂಬ ನಿರಾಶಾ ಭಾವನೆ ಇರಬಾರದು. ಪ್ರತಿಯೊಬ್ಬರಲ್ಲಿಯೂ ಆಶಾ ಮನೋಭಾವ ಇರಬೇಕು. ಒಂದೊಂದು ಮತವು ಅತ್ಯಮೂಲ್ಯವಾದದ್ದು. ಮತದಾನದಿಂದ ರಾಜ್ಯ ಹಾಗೂ ದೇಶ ಸದೃಢವಾಗಲು ಕಾರಣರಾಗುತ್ತೀರಿ. ಕಡ್ಡಾಯವಾಗಿ ಮತದಾನ ಮಾಡಬೇಕು. ಜನ ಪ್ರತಿನಿಧಿಗಳು ಚೆನ್ನಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಮೊದಲು ಒಳ್ಳೆಯವರನ್ನು ನಾವು ಆಯ್ಕೆ ಮಾಡಬೇಕು. ನೀವು ನೀಡುವ ಒಂದು ಮತ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ. ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು ಹಾಗೂ ಬೇರೆಯವರು ಆಮಿಷಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು. ಯಾವುದೇ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಬಿ.ಎಸ್.ಮಂಜುನಾಥಸ್ವಾಮಿ ಅವರು ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.