ಮನೆ ರಾಜಕೀಯ ಬೆಳಗಾವಿ ಗಡಿ ವಿವಾದ: ಮುಂದಿನ ವಾರ ಸರ್ವಪಕ್ಷ ಸಭೆ

ಬೆಳಗಾವಿ ಗಡಿ ವಿವಾದ: ಮುಂದಿನ ವಾರ ಸರ್ವಪಕ್ಷ ಸಭೆ

0

ಬೆಂಗಳೂರು(Bengaluru): ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮುಂದಿನ ವಾರ ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

“ವಿವಾದವನ್ನು ಮಾತುಕತೆ ಮೂಲಕವೂ ಬಗೆಹರಿಸಿಕೊಳ್ಳುವ ಚಿಂತನೆ ಇದೆ’ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿರುವುದನ್ನು ಗಮನಿಸಿದ್ದೇನೆ. ಈ ವಿಚಾರವೂ ಸೇರಿದಂತೆ ಗಡಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗುರುವಾರ ಬೊಮ್ಮಾಯಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದು ಚರ್ಚಿಸುವಂತೆ ಹೇಳಿದ್ದರು.

ಗಡಿ ವಿವಾದಕ್ಕೆ ಸಂಬಂಧಿಸಿ ಮಹಾ ಸಿಎಂ ಶಿಂಧೆ ಸಭೆ ನಡೆಸಿದ್ದಲ್ಲದೆ, ಸುಪ್ರೀಂ ಕೋರ್ಟ್’ನಲ್ಲಿರುವ ದಾವೆಯ ಬಗ್ಗೆಯೂ ಉಲ್ಲೇಖೀಸಿದ್ದಾರೆ. ಇದರ ಮಧ್ಯೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಚಿಂತನೆ ಇದೆ ಎಂದೂ ಹೇಳಿರುವುದು ಗಮನಕ್ಕೆ ಬಂದಿದೆ. ಆದರೆ ದಾವೆ ಹೂಡಿದ್ದು ಅವರೇ, ಮಾತುಕತೆಯ ಚಿಂತನೆ ಬಗ್ಗೆಯೂ ಅವರೇ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್’ನಲ್ಲಿ ವಾದ ಮಂಡಿಸುವ ಬಗ್ಗೆ ಹಿಂದಿನ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕಾಗಿ ನಾವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮುಖ್ಯವಾಗಿ ನಮಗೆ ಬಲವಾದ ನೆಲೆಗಟ್ಟು ಇದೆ. ಹೀಗಾಗಿ ಸದ್ಯ ನಮ್ಮ ಮುಂದಿರುವುದು ಸುಪ್ರೀಂ ಕೋರ್ಟ್’ನಲ್ಲಿ ವಾದ ಮಂಡಿಸುವ ವಿಚಾರ ಮಾತ್ರ ಎಂದು ಹೇಳಿದರು.