ಮನೆ ದೇವಸ್ಥಾನ ಹಂಗಳ ಶ್ರೀ ವರದರಾಜಸ್ವಾಮಿ ದೇವಾಲಯ

ಹಂಗಳ ಶ್ರೀ ವರದರಾಜಸ್ವಾಮಿ ದೇವಾಲಯ

0

ಹಂಗಳ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಒಂದು ಗ್ರಾಮ. ಈ ಪುಟ್ಟ ಗ್ರಾಮದಲ್ಲಿ 10ನೇ ಶತಮಾನದಲ್ಲಿ ನಿರ್ಮಿಸಲಾದ ವೈಷ್ಣವ ಪರಂಪರೆಯ ವಿಶಿಷ್ಟ ದೇವಾಲಯವಿದೆ ಅದವೇ ವರದರಾಜಸ್ವಾಮಿ ದೇವಾಲಯ.

ಸುಖನಾಸಿಗಳ ವಾಸ್ತುಶಿಲ್ಪದ ಆಧಾರದ ಮೇಲೆ 10ನೇ ಶತಮಾನದಲ್ಲಿ ಅಂದರೆ ತಲಕಾಡು ಗಂಗರ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯ ವಿವಿಧ ಹಂತದಲ್ಲಿ ಅಭಿವೃದ್ಧಿ ಹೊಂದಿದೆ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ದೇವಾಲಯದ ಒಳ ನವರಂಗದಲ್ಲಿರುವ ಮಾಧವನ ವಿಗ್ರಹ ಹೊಯ್ಸಳರ ಶೈಲಿಯಲ್ಲಿರುವದನ್ನು ಉಲ್ಲೇಖಿಸುತ್ತಾರೆ. ಜೊತೆಗೆ ದೇವಾಲಯದ ಪೂರ್ವಭಾಗದ ಮುಖ ಮಂಟಪ ಗೋಪುರ ವಿಜಯನಗರದ ವಾಸ್ತು ಶೈಲಿಯಲ್ಲಿದೆ. ಹೀಗಾಗಿ ಈ ದೇವಾಲಯವನ್ನು ಹಲವು ರಾಜರು ಅಭಿವೃದ್ಧಿ ಪಡಿಸಿದ್ದಾರೆ ಎಂದು ವಾದಿಸುತ್ತಾರೆ.

ಈ ದೇವಾಲಯ ಸಾಧಾರಣ ಕಲ್ಲಿನ ಕಟ್ಟಡವಾಗಿದ್ದು ಕಾಡುಗಲ್ಲಿನ ಕಂಬಗಳಿಂದ ಕೂಡಿದೆ. ದೇವಾಲಯದ ಪ್ರವೇಶದಲ್ಲಿ ಕಲ್ಲಿನ ಬಲಿಪೀಠವಿದೆ. ಮಂಟಪದ ಎಡಗಡೆ ಕೊಳಲನೂದುತ್ತಿರುವ ಶ್ರೀಕೃಷ್ಣನ ಉಬ್ಬಶಿಲ್ಪವಿದೆ. ಮೇಲ್ಭಾಗದಲ್ಲಿ ಗಾರೆಗಚ್ಚಿನ ಗೋಪುರಗಳಿದ್ದು ವಿವಿಧ ದೇವತೆಗಳ ವಿಗ್ರಹಗಳಿವೆ. ಅವುಗಳಲ್ಲಿ ಹಲವು ಕರಗಿಹೋಗಿದ್ದು ಅಸ್ಪಷ್ಟವಾಗಿವೆ.

ವಿಶಾಲವಾದ ಪ್ರದೇಶದಲ್ಲಿರುವ ಈ ದೇವಾಲಯದಲ್ಲಿ ಗರ್ಭಗೃಹವಿದ್ದು, ಗರ್ಭಗೃಹದ ಮೇಲೆ ಗಾರೆಯ ಗೋಪುರವಿದೆ. ಗರ್ಭಗೃಹದ ಹೊರಬಿತ್ತಿಗಳಲ್ಲಿ ಸಾಧಾರಣ ಅರೆಕಂಬಗಳ ಕೆತ್ತನೆ ಇದೆ. ಪ್ರಧಾನಗರ್ಭಗೃಹದಲ್ಲಿ ವರದರಾಜಸ್ವಾಮಿಯ ಸುಂದರ ಹಾಗೂ ಪುರಾತನವಾದ ಕೃಷ್ಣ ಶಿಲೆಯ ವಿಗ್ರಹವಿದೆ. ನಿತ್ಯ ವೈಷ್ಣವ ಸಂಪ್ರದಾಯದ  ರೀತ್ಯ ಪೂಜೆಗಳು ನೆರವೇರುತ್ತವೆ.

2014ರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ರಾಜ್ಯ ಪ್ರಾಚ್ಯ ವಸ್ತು ಇಲಾಖೆ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ 26 ಲಕ್ಷ ರೂಪಾಯಿ ವೆಚ್ಚದಲ್ಲಿ ವರದರಾಜಸ್ವಾಮಿಯ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದ್ದು, ವಿಮಾನ ಗೋಪುರ ಪುನರ್ ನಿರ್ಮಾಣ ಮಾಡಿ ಕಳಶ ಅಳವಡಿಸಲಾಗಿದೆ.

ಪ್ರಸ್ತುತ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಈ ದೇವಾಲಯವನ್ನು ಪುರಾತನ ಅವಶೇಷಗಳಿಂದ ಕೂಡಿದ ಪ್ರಾಚೀನ ಸ್ಮಾರಕ ಎಂದು ಘೋಷಿಸಿ ರಕ್ಷಿಸಲಾಗಿದೆ.