ನವದೆಹಲಿ: ಸಂವಿಧಾನವೇ ಭಾರತದ ಬಹುದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸುಪ್ರೀಂಕೋರ್ಟ್’ನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ಪ್ರಜಾಪ್ರಭುತ್ವದ ತಾಯಿ. ದೇಶದ ಸಂವಿಧಾನವು ಮುಕ್ತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿದೆ ಎಂದರು.
ವ್ಯಕ್ತಿ ಆಗಿರಲಿ, ಸಂಸ್ಥೆ ಆಗಿರಲಿ ನಮ್ಮ ಕರ್ತವ್ಯಗಳಿಗೇ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದತ್ತ ದೃಷ್ಟಿ ನೆಟ್ಟಿದೆ. ದೇಶವು ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಹೊರಹೊಮ್ಮಿರುವುದು ಮತ್ತು ಜಾಗತಿಕವಾಗಿ ವರ್ಚಸ್ಸು ಹೆಚ್ಚುತ್ತಿರುವುದರಿಂದ ಇಡೀ ವಿಶ್ವವು ಭಾರತದ ಮೇಲಿಟ್ಟಿರುವ ನಿರೀಕ್ಷೆ ಹೆಚ್ಚಾಗಿದೆ ಎಂದು ಮೋದಿ ಹೇಳಿದರು.
ಹೊಸ ಅವಕಾಶಗಳು ಭಾರತದ ಮುಂದಿವೆ. ಎಲ್ಲ ಅಡೆತಡೆಗಳನ್ನು ಮೀರಿ ನಮ್ಮ ದೇಶ ಮುಂದಕ್ಕೆ ಸಾಗುತ್ತಿದೆ. ಇನ್ನು ಒಂದು ವಾರದಲ್ಲಿ ನಾವು ಜಿ-20 ದೇಶಗಳ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದೇವೆ. ನಾವೆಲ್ಲ ಜತೆಗೂಡಿ ವಿಶ್ವದ ಮುಂದೆ ಭಾರತದ ವರ್ಚಸ್ಸನ್ನು ಹೆಚ್ಚಿಸಬೇಕು. ಇದು ನಮ್ಮ ಸಾಮೂಹಿಕ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು.
ಇಂದು ಮುಂಬೈ ಭಯೋತ್ಪಾದಕ ದಾಳಿಗೆ 14 ವರ್ಷ. ಭಾರತವು ತನ್ನ ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನು ಸಂಭ್ರಮಿಸುತ್ತಿರುವ ಸಂದರ್ಭದಲ್ಲೇ, ಮಾನವೀಯತೆಯ ಶತ್ರುಗಳು ಭಾರತದ ಮೇಲೆ ಅತಿದೊಡ್ಡ ದಾಳಿಯನ್ನು ನಡೆಸಿದರು. ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.