ಮನೆ ಕಾನೂನು ಯುವ ವಕೀಲರು ದುರ್ಬಲರ ಪರವಾಗಿ ನಿಲ್ಲಬೇಕು: ನ್ಯಾ. ಎಂ.ಎಲ್.ರಘುನಾಥ್‌

ಯುವ ವಕೀಲರು ದುರ್ಬಲರ ಪರವಾಗಿ ನಿಲ್ಲಬೇಕು: ನ್ಯಾ. ಎಂ.ಎಲ್.ರಘುನಾಥ್‌

0

ಮೈಸೂರು(Mysuru): ಕಾನೂನು ವಿದ್ಯಾರ್ಥಿಗಳು, ಯುವ ವಕೀಲರು ತಮ್ಮ ವೃತ್ತಿಯನ್ನು ಸವಾಲಾಗಿ ತೆಗೆದುಕೊಂಡು ಸದಾ ದುರ್ಬಲರ ಪರವಾಗಿ ನಿಲ್ಲಬೇಕು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್‌ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ 3 ಮತ್ತು 5 ವರ್ಷಗಳ ಕಾನೂನು ಪದವಿಗೆ ಪ್ರವೇಶ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ‘ಅಭಿವಿನ್ಯಾಸ ಕಾರ್ಯಕ್ರಮ’ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಕ್ಕೆ ವೈದ್ಯರಂತೆಯೇ ವಕೀಲರ ಅಗತ್ಯವೂ ಇದೆ. ದೇಹದ ಕಾಯಿಲೆಗೆ ವೈದ್ಯರು ಮದ್ದು ನೀಡಿದರೆ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಕೀಲರ ಪಾತ್ರ ಸದಾ ದೊಡ್ಡದು. ಸಮಾಜದ ಸಂಕಟಗಳು, ಬಿಕ್ಕಟ್ಟುಗಳಿಗೆ ವಕೀಲರು ಮಿಡಿಯಬೇಕು ಎಂದು ತಿಳಿಸಿದರು.

ಸಮಾಜದ ಎಲ್ಲ ಕ್ಷೇತ್ರದಲ್ಲೂ ನೈತಿಕತೆ ಕಾಣೆಯಾಗುತ್ತಿರುವ ವಿದ್ಯಮಾನವನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ನ್ಯಾಯ ಪಡೆಯುವ ದಾರಿಗಳು ತೀರಾ ದುಬಾರಿಯಾಗಿ ಜನರು ನ್ಯಾಯಾಲಯಗಳಿಗೆ ಬರುವುದನ್ನೇ ಬಿಟ್ಟಿದಾರೆ. ಇಂತಹ ಸಂದರ್ಭದಲ್ಲಿ ಎಂದು ಸಲಹೆ ನೀಡಿದರು.

ವ್ಯಕ್ತಿಯೊಬ್ಬನ ವೈಯಕ್ತಿಕ ಮತ್ತು ಸಮಾಜದ ಸಾಮೂಹಿಕ ಸಮಸ್ಯೆಗಳೆರಡೂ ಇಂದು ನ್ಯಾಯಾಲಯಗಳಿಗೆ ಬರುತ್ತಿವೆ. ಈಚೆಗೆ, ಕೌಟುಂಬಿಕ ಸಮಸ್ಯೆಗಳು ಸಮಾಜದಲ್ಲಿ ಹೊಸಬಗೆಯ ಬಿಕ್ಕಟ್ಟುಗಳನ್ನು ಹುಟ್ಟು ಹಾಕುತ್ತಿವೆ. ವಕೀಲರು ಆಸ್ತಿ, ತೆರಿಗೆ, ಕಾರ್ಪೋರೆಟ್‌ ಸಮಸ್ಯೆಗಳಿಗೆ ಸ್ಪಂದಿಸುವಷ್ಟೇ ಪ್ರಮಾಣದಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವತ್ತಲೂ ಕಣ್ಣು ಹಾಯಿಸಬೇಕು. ವಕೀಲರು ವ್ಯಕ್ತಿಯೊಬ್ಬನ ವೈಯಕ್ತಿಕ ಸಮಸ್ಯೆಗೂ ಹಾಗೂ ಸಮಾಜದ ಬಿಕ್ಕಟ್ಟುಗಳಿಗೂ ಕಣ್ಣು–ಕಿವಿಯಾಗಿ ಸಂರಕ್ಷಕನ ರೀತಿ ವರ್ತಿಸಬೇಕು ಎಂದು ತಿಳಿಸಿದರು.

ಕಲಿಯುವ ಅವಕಾಶಗಳ ಹೆಚ್ಚಿನ ಸಾಧ್ಯತೆಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ನೋಡಬಹುದು. ಕಾನೂನು ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ ಪ್ರತಿಯೊಬ್ಬರಿಗೂ ಇಂಗ್ಲಿಷ್ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನಗಳು ಯುವ ಸಮುದಾಯದಲ್ಲಿ ಓದುವ ತಾಳ್ಮೆ ಮತ್ತು ಶಕ್ತಿಯನ್ನು ಕಿತ್ತುಕೊಂಡಿದೆ. ಮೈಸೂರಿನ ಅತ್ಯಂತ ಹಿರಿಯ ವಕೀಲರಲ್ಲಿ ಈಗಲೂ ಇರುವ ಓದಿನ ಹಸಿವನ್ನು ಕಂಡು ನಾನು ಚಕಿತನಾಗುತ್ತೇನೆ. ಆದರೆ, ಈಗಿನ ವಿದ್ಯಾರ್ಥಿಗಳಲ್ಲಿ ಇಂತಹ ತೀವ್ರ ಓದಿನ ಹಸಿವು ಮತ್ತು ಜ್ಞಾನ ಗಳಿಸುವ ಉತ್ಸಾಹ ಕಾಣೆಯಾಗಿದೆ ಎಂದು ಕಳವಳ ವ್ಯಕ್ತ‍ಪಡಿಸಿದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್‌, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ.ವಾಸುದೇವ, ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಕೃಷ್ಣ, ‘ಅಭಿವಿನ್ಯಾಸ ಕಾರ್ಯಕ್ರಮ’ದ ಸಂಯೋಜಕ ಎಚ್.ಎಸ್.ಶಿವಕುಮಾರ್ ಇದ್ದರು.