ಮನೆ ರಾಜ್ಯ ತಳ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ನಮ್ಮ ಆದ್ಯತೆ: ಬೊಮ್ಮಾಯಿ

ತಳ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ ನಮ್ಮ ಆದ್ಯತೆ: ಬೊಮ್ಮಾಯಿ

0

 ಮೈಸೂರು(Mysuru): ಈ ದೇಶದ ಆರ್ಥಿಕತೆ ಕೆಳಹಂತದ ದುಡಿಯುವ ಜನರಲ್ಲಿದ್ದು ಈ ಸಮೂದಾಯದವರಿಗೆ ಶಿಕ್ಷಣ ಉದ್ಯೋಗ ನೀಡುವ ಮೂಲಕ ಸಬಲರನ್ನಾಗಿಸಿ ಅವರನ್ನು ಜೊತೆಯಲ್ಲಿ ಕೊಂಡೊಯ್ಯಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೋಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ನಂಜನಗೂಡು ತಾಲೋಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಹಾಗೂ ನುಗು ನದಿಯಿಂದ ಹೆಡಿಯಾಲ ಮತ್ತು 12 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನರ ಬಹುದಿನಗಳ ಕನಸಾದ ನುಗು ಹಾಗು ಹೆಡಿಯಾಲ ಏತ ನೀರಾವರಿ ಯೋಜನೆಯಿಂದ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ದಿಯಾಗುವುದರೊಂದಿಗೆ ರೈತರು ಸ್ವಾವಲಂಬಿಗಳಾಗಲಿದ್ದಾರೆ ಇದರೊಂದಿಗೆ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಕೋಟಿ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿದೆ ಎಂದರು.
ನಮ್ಮ ಸರ್ಕಾರ ಪರಿಶಿಷ್ಟ ಜಾತಿಗೆ ಶೇ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7 ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ದಲಿತರು ಹಿಂದುಳಿದವರ ಬಗೆಗೆ ಮಾತನಾಡಿದರೆ ಸಾಲದು ಕೆಲಸ ಮಾಡಿ ತೋರಿಸಬೇಕು, ಅವರು ಸ್ವಾವಲಂಬಿ ಬದುಕು ನಡೆಸಲು ಅವಕಾಶ ಒದಗಿಸಬೇಕು, ಅಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಪ್ರತಿವರ್ಷ 1 ಸಾವಿರ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವ ಮೂಲಕ ಮುಂದಿನ 5 ವರ್ಷಗಳಲ್ಲಿ ಐದು ಸಾವಿರ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದೆಂದರು.
ದಕ್ಷಿಣದ ಕಾಶಿ ಎಂದೇ ಹೆಸರಾದ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ 75 ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ನಂಜನಗೂಡು ಅಂತರಾಷ್ಟ್ರೀಯಮಟ್ಟದ ಪ್ರವಾಸಿ ಕ್ಷೇತ್ರವಾಗಲಿದೆ ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್‌’ರ ಕನಸಿನ ಯೋಜನೆಯಂತೆ ಎಲ್ಲಾ ಜನಾಂಗಗಳ ಸಮುದಾಯ ಭವನಗಳನ್ನ ಒಂದೇ ಕಡೆ ನಿರ್ಮಾಣ ಮಾಡುವ ಮೂಲಕ ‘ಸಮಾನತೆಯ ಸಂಕೀರ್ಣ’ ನಿರ್ಮಿಸಿ ಸಮಾನತೆಯ ಆಶಯ ಈಡೇರಿಸಲಾಗುವುದೆಂದರು.
ಮಹಿಳೆಯರು, ಯುವಕರ ಪರವಾಗಿ ನಮ್ಮ ಸರ್ಕಾರವಿದ್ದು, ಮಹಿಳೆಯರಿಗಾಗಿ ಸ್ತ್ರೀ ಸಾಮರ್ಥ್ಯ ಯೋಜನೆಯ ಮೂಲಕ ಪ್ರತಿ ಗ್ರಾಮಗಳ 2 ಸಂಘಗಳಿಗೆ ಹಾಗೂ ಯುವಕ ಸ್ವಸಹಾಯ ಸಂಘಗಳಿಗೆ ತಲಾ 5 ಲಕ್ಷ ನೀಡುವ ಯೋಜನೆ ಜಾರಿಗೆ ತರಲಾಗಿದೆ ಮತ್ತು ವಿವಿಧ ವೃತ್ತಿಗಳಲ್ಲಿ ತೊಡಗಿರುವ ಗ್ರಾಮೀಣರಿಗೆ ಕಾಯಕ ಯೋಜನೆ ಜಾರಿಗೆ ತರಲಾಗಿದೆ ಇದರೊಂದಿಗೆ ಮೀನುಗಾರರು, ನೇಕಾರರು, ಡ್ರೈವರ್‌’ಗಳ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತರಲಾಗಿದೆ ಎಂದರು.
ನಮ್ಮ ಸರ್ಕಾರ ತೀವ್ರತೆರನಾದ ಡಯಾಲಿಸಿಸ್ ಮತ್ತು ಕ್ಯಾನ್ಸರ್ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ ಎಂದರು.
ಜನಪ್ರಿಯ ಶಾಸಕರಾದರೆ ಸಾಲದು : ಕೇವಲ ಜನಪ್ರಿಯ ಶಾಸಕರಾದರೆ ಸಾಲದು, ಜನಪರ ಶಾಸಕರಾಗುವ ಮೂಲಕ ಜನಪರ ಕೆಲಸಗಳನ್ನು ಮಾಡಿ ಜನರಿಗೆ ಉಪಯೋಗ ಆಗಬೇಕು. ಅಂತಹ ಜನಪರ ಕೆಲಸಗಳನ್ನು ಈ ಕ್ಷೇತ್ರದ ಶಾಸಕರು ಮಾಡುತ್ತಾ ಜನಾನುರಾಗಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕರಾದ ನಿರಂಜನಕುಮಾರ್, ಹೆಚ್.ಎಸ್. ಮಹದೇವಸ್ವಾಮಿ. ಪ್ರಾದೇಶಿಕ ಆಯುಕ್ತರಾದ ಪ್ರಕಾಶ್. ಡಾ.ಕೆ.ವಿ. ರಾಜೇಂದ್ರ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಪೂರ್ಣಿಮ. ಎಸ್.ಪಿ. ಚೇತನ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.