ಮನೆ ಸುದ್ದಿ ಜಾಲ ನರೇಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗ ನೀಡಿ: ಸಿಇಒ ಬಿ.ಆರ್.ಪೂರ್ಣಿಮಾ ಕರೆ

ನರೇಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗ ನೀಡಿ: ಸಿಇಒ ಬಿ.ಆರ್.ಪೂರ್ಣಿಮಾ ಕರೆ

0

ಮೈಸೂರು(Mysuru) : ನರೇಗಾ ಯೋಜನಯಡಿ ಹೆಚ್ಚಿನ ಜನರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಕರೆ ನೀಡಿದರು.

ಮಂಗಳವಾರ ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ `ಪ್ರಗತಿ ಪರಿಶೀಲನೆ ಸಭೆ’ಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

 ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ನರೇಗಾ ಯೋಜನೆಯು ಉತ್ತಮ ಯೋಜನೆಯಾಗಿದ್ದು, ಇದನ್ನು ಸರಿಯಾದ ರೀತಿಯಲ್ಲಿ  ಸದ್ಭಳಕೆ ಮಾಡಿಕೊಂಡು ಜನರಿಗೆ ಉದ್ಯೋಗ ಒದಗಿಸಿಕೊಡಬೇಕು. ಇದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುವಂತಹ ಸಾರ್ವಜನಿಕ ಆಸ್ತಿಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಗ್ರಾಮಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿ, ಅನುಷ್ಠಾನ ಇಲಾಖೆಯವರು ನಿಗದಿತ ಸಮಯಕ್ಕೆ ಕೂಲಿ ಪಾವತಿ ಮಾಡಿ, ಜಾಬ್ ಕಾರ್ಡ್ ಗಳನ್ನು ಪರಿಶೀಲಿಸಿ,ಮೃತಪಟ್ಟವರ ಹೆಸರನ್ನು ಜಾಬ್ ಕಾರ್ಡ್ ನಿಂದ ತೆಗೆಯಿರಿ. ಕಾಮಗಾರಿಯ ಗುಣಮುಟ್ಟದ ಫೋಟೊಗಳ ಜೊತೆಗೆ ಅಗತ್ಯ ದಾಖಲೆಗಳನ್ನು ಕಡತಗಳಲ್ಲಿ ದಾಖಲಿಸಿ ಎಂದು ಸಲಹೆ ನೀಡಿದರು.

ನರೇಗಾ ಯೋಜನೆಯಡಿ ಕಂಪಲಾಪುರ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಾಂಪೌಂಡ್, ಬೋಜನಾಲಯ, ಬ್ಯಾಡ್ಮಿಂಟನ್ ಕೋರ್ಟ್, ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಹಾಗೂ ಅತ್ತಿಗೋಡು ಗ್ರಾ.ಪಂನ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

ಸಕಾಲ ಅರ್ಜಿ ವಿಲೇವಾರಿ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಉತ್ತಮವಾಗಿದೆ. ಪೂರ್ಣ ಪ್ರಮಾಣದಲ್ಲಿ ನಿಗದಿತ ಸಮಯದಲ್ಲಿ ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಯುವಕರು ಮಾತ್ರವಲ್ಲದೇ ವೃದ್ಧರು ಗ್ರಂಥಾಲಯದಲ್ಲಿ ದಿನಪತ್ರಿಕೆಗಳನ್ನು ಓದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವವರಿಗೂ ಗ್ರಂಥಾಲಯ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಹೆಚ್ಚಿನ ಒತ್ತು ನೀಡಿ. ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಉತ್ತಮ ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ಒದಗಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಆರ್.ಕೃಷ್ಣಕುಮಾರ್, ಸಹಾಯಕ ನಿರ್ದೇಶಕರಾದ(ಗ್ರಾ.ಉ) ಕರುಣಾಕರ್ ಸೇರಿದಂತೆ ಅನುಷ್ಠಾನ ಇಲಾಖೆ ಅಧಿಕಾರಿಗಳು, ಪಿಡಿಓಗಳು,ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಡಿಇಓಗಳು, ಬಿಎಫ್‌’ಟಿಗಳು ಉಪಸ್ಥಿತರಿದ್ದರು.