ಮೈಸೂರು(Mysuru): ಬೆಂಗಳೂರಿನಂತೆಯೇ ಮೈಸೂರಿನಲ್ಲೂ ಮತದಾರರ ಪಟ್ಟಿಗೆ ಕನ್ನ ಹಾಕಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಅಪವಿತ್ರ ಕಾರ್ಯ ಎಸಗಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆರೋಪಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ 1,45,908 ಮತದಾರ ಹೆಸರುಗಳನ್ನು ಯಾವುದೇ ಕಾರಣ ನೀಡದೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ಚುನಾವಣೆ ಗೆಲುವಿಗಾಗಿ ಬಿಜೆಪಿ ಅಕ್ರಮದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಕೂಡಲೇ ನಾಗರಿಕರು ಖಾತ್ರಿ ಪಡಿಸಿಕೊಳ್ಳಬೇಕು. ಗೆಲ್ಲುವುದಕ್ಕಾಗಿ ಏನು ಬೇಕಾದರೂ ಮಾಡಲು ಆಳುವ ಸರ್ಕಾರ ಸಿದ್ಧವಿದೆ. ಜನರು ಜಾಗೃತಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿವೆ. ನರಸಿಂಹರಾಜ ಕ್ಷೇತ್ರದಲ್ಲಿ 18,007, ಚಾಮರಾಜ-16,242, ಕೃಷ್ಣರಾಜ-10,604, ಕೆ.ಆರ್.ನಗರ-17,856, ವರುಣಾ-11,987, ತಿ.ನರಸೀಪುರ-12,367, ಚಾಮುಂಡೇಶ್ವರಿ-17,847, ಎಚ್.ಡಿ.ಕೋಟೆ -10,479, ಹುಣಸೂರು-10,220, ಪಿರಿಯಾಪಟ್ಟಣ-8,570 ಹಾಗೂ ನಂಜನಗೂಡು ಕ್ಷೇತ್ರದಲ್ಲಿ 11,724 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.
ವರ್ಗಾವಣೆ, ಎರಡು ಬಾರಿ ಹೆಸರು ನೋಂದಣಿಯಾಗಿದ್ದರೆ ಅಂಥ ಮತದಾರರ ಹೆಸರನ್ನು ಕೈ ಬಿಡಲಾಗುತ್ತದೆ. ನಿರ್ದಿಷ್ಟ ಕಾರಣವನ್ನು ನೀಡಲಾಗುತ್ತದೆ. ಆದರೆ, 1.45 ಲಕ್ಷ ಮಂದಿ ಹೆಸರನ್ನು ಕೈ ಬಿಡುವಾಗ ಯಾವುದೇ ಕಾರಣ ನೀಡಿಲ್ಲ. ಮತ ಕನ್ನದ ವಿರುದ್ಧ ಪ್ರಗತಿಪರರು, ಬುದ್ದಿಜೀವಿಗಳು, ಲೇಖಕರು ಹಾಗೂ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಬೇಕು. ಚಳವಳಿ ನಡೆಸಬೇಕು ಎಂದು ವೆಂಕಟೇಶ್ ಒತ್ತಾಯಿಸಿದರು.
ಮತದಾರರ ಹಕ್ಕನ್ನು ಕಸಿಯಲು ಹೊರಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಧಾನಿ ನರೇಂದ್ರ ಮೋದಿ ಕ್ರಮವಹಿಸಬೇಕು ಎಂದರು.
ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ರಾಜ್ಯದ ವಿವಿಧೆಡೆಯೂ ಮತ ಕನ್ನ ನಡೆಯುತ್ತಿದೆ. ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವನ್ನು ಸ್ಥಗಿತಗೊಳಿಸಬೇಕು. ನಿಯೋಜಿಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಪಾರದರ್ಶಕ ಚುನಾವಣೆ ನಡೆಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮತ ಕನ್ನದ ಕುರಿತು ಜೆಡಿಎಸ್ ನಾಯಕರು ಪ್ರತಿಕ್ರಿಯೆ ನೀಡದಿರುವುದನ್ನು ಗಮನಿಸಿದರೆ, ಅಕ್ರಮದಲ್ಲಿ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಎನ್.ಎಸ್.ಗೋಪಿನಾಥ್, ಭಾಸ್ಕರ್ ಎಲ್.ಗೌಡ, ವಕ್ತಾರ ಮಹೇಶ್, ಗಿರೀಶ್ ಇದ್ದರು.