ಮನೆ ಸುದ್ದಿ ಜಾಲ ಡಿ. 8 ರಿಂದ 15 ರ ವರಗೆ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವ

ಡಿ. 8 ರಿಂದ 15 ರ ವರಗೆ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವ

0

ಮೈಸೂರು: ಮೈಸೂರು ದಸರಾ ನಂತರ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಕ್ರಮ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ‘ಬ್ರಾಂಡ್’ ಆಗಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.


 ರಂಗಾಯಣ ಮೈಸೂರು ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ. 8 ರಿಂದ 15 ರ ವರಗೆ ‘ಬಹುರೂಪಿ’ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ನಡೆಯುವ ಜೈಪುರಿ ಸಾಹಿತ್ಯ ಉತ್ಸವದಂತೆ 22 ನೇ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ಬ್ರಾಂಡ್ ಕಾರ್ಯಕ್ರಮವಾಗಬೇಕು. ಈ ಕಾರ್ಯಕ್ರಮಕ್ಕೆ ನಾಡಿನ ಎಲ್ಲಡೆಯಿಂದ ಪ್ರತಿಷ್ಟಿತರು ಆಗಮಿಸುತ್ತಿದ್ದು ಅದರೊಂದಿಗೆ ಬರುವ ವಿವಿಧ ರಾಜ್ಯಗಳ ಕಲಾವಿದರನ್ನು ಪ್ರೇಕ್ಷಕರನ್ನು ಚನ್ನಾಗಿ ಉಪಚರಿಸುವ ಮೂಲಕ ಮೈಸೂರಿನ ಘನತೆಯನ್ನು ಹೆಚ್ಚಿಸಬೇಕೆಂದರು.
 ರಂಗೋತ್ಸವದಲ್ಲಿ ಯಾವುದೇ ವಿವಾದಾತ್ಮಕ ಅಥವ ನಿಷೇಧಿತ ನಾಟಕಗಳ ಪ್ರದರ್ಶನವಾಗಬಾರದು, ಸರ್ಕಾರ ಅನುಮೋದಿಸಿರುವ ನಾಟಕಗಳ ಪ್ರದರ್ಶನ ನಡೆಯಲಿ, ಒಟ್ಟಾರೆ ರಂಗೋತ್ಸವ ನೆನಪಿನಲ್ಲುಳಿಯುವಂತಹ ಕಾರ್ಯಕ್ರಮವಾಗಬೇಕು ಅತಿಥಿಗಳು ಉಳಿದುಕೊಳ್ಳುವ ವಸತಿ ವ್ಯವಸ್ಥೆ ಬಗೆಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
 ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು, ಯಾವುದೇ ರೀತಿಯ ಅವ್ಯವಸ್ಥೆ, ಅವಘಢಗಳಾಗದಂತೆ ನೋಡಿಕೊಳ್ಳುವ ಮೂಲಕ ಸಾಂಸ್ಕೃತಿಕ ರಾಜಧಾನಿ ಎಂದು ಹೆಸರು ಹೊಂದಿರುವ ಮೈಸೂರಿನಲ್ಲಿ ಜರುಗುವ ರಂಗೋತ್ಸವ ಇಡೀ ದೇಶದ ಗಮನ ಸೆಳೆಯಬೇಕು, ಪ್ರತಿ ವರ್ಷದಿಂದ ವರ್ಷಕ್ಕೆ ರಂಗೋತ್ಸವವನ್ನು ಉತ್ತಮ ಪಡಿಸುವಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದರು.
ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಮಾಹಿತಿ ನೀಡಿ, ರಂಗೋತ್ಸವವು 8 ದಿನಗಳ ಕಾಲ ನಡೆಯಲಿದ್ದು, ರಂಗಾಯಣದ 05 ಪ್ರಮುಖ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ, ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರವರಗೆ ಕಾರ್ಯಕ್ರಮಗಳು ನಡೆಯಲಿದ್ದು ಒಟ್ಟು 21 ನಾಟಕಗಳು ಪ್ರದರ್ಶನಗೊಳ್ಳಲಿವೆ. ಭಾರತೀಯತೆ ಎಂಬುದು ಈ ಬಾರಿಯ ವಿಷಯವಾಗಿದ್ದು, ಭಾರತೀಯತೆ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ಕೂಡ ನಡೆಯಲಿದೆ. ಇದರೊಂದಿಗೆ ವಸ್ತು ಪ್ರದರ್ಶನ, ಜಾನಪದ ಕಾರ್ಯಕ್ರಮ ನಡೆಯಲಿವೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸುತಿದ್ದು ಕಲಾಮಂದಿರದ ಆಜುಬಾಜು ಟ್ರಾಫಿಕ್ ಸಮಸ್ಯೆಯಾಗದಂತೆ ಸಾರಿಗೆ ಇಲಾಖೆಯವರು ನೋಡಿಕೊಳ್ಳುವಂತೆ ಹಾಗೂ ನಗರ ಪಾಲಿಕೆಯವರು ರಂಗಾಯಣದ ಆವರಣದ ಸ್ವಚ್ಚತೆ ನೋಡಿಕೊಳ್ಳಲು ಹೊರರಾಜ್ಯಗಳಿಂದ ಆಗಮಿಸುವ ಕಲಾವಿದರುಗಳ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಆರೋಗ್ಯ ಇಲಾಖೆಯವರು ನೋಡಿಕೊಳ್ಳಲು ವಿನಂತಿಸಿದರು.
ಸಭೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ಧೇಶಕರಾದ ಮಲ್ಲಿಕಾರ್ಜುನಸ್ವಾಮಿ, ನಿರ್ಮಲಾ ಮಠಪತಿ , ಡಿ.ಸಿ.ಪಿ. ಗೀತಾ ಪ್ರಸನ್ನ, ಪ್ರವಾಸೋದ್ಯಮ ಇಲಾಖೆಯ ರಾಜೇಶ್‌ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.