ಮನೆ ರಾಜಕೀಯ ದತ್ತಾತ್ರೇಯ ದೇವರ ಹೆಸರಿನ ಜಾಗದ ಅಕ್ರಮ ಮಂಜೂರಾತಿ ರದ್ದು ಮಾಡಬೇಕು: ಸಿ.ಟಿ.ರವಿ ಆಗ್ರಹ

ದತ್ತಾತ್ರೇಯ ದೇವರ ಹೆಸರಿನ ಜಾಗದ ಅಕ್ರಮ ಮಂಜೂರಾತಿ ರದ್ದು ಮಾಡಬೇಕು: ಸಿ.ಟಿ.ರವಿ ಆಗ್ರಹ

0

ಬೆಂಗಳೂರು(Bengaluru): ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ದೇವರ ಹೆಸರಿನ 1,860 ಎಕರೆ ಜಾಗ ಇರುವ ದಾಖಲೆ ಇದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಕ್ರಮ ಮಂಜೂರಾತಿ ರದ್ದು ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅಕ್ರಮ ಮಂಜೂರಾತಿ ರದ್ದುಗೊಳಿಸಿ ದತ್ತಾತ್ರೇಯ ದೇವರ ಹೆಸರಿನಲ್ಲಿ ಜಮೀನು ಕಾಯ್ದಿರಿಸಬೇಕು. ತನಿಖೆಗೆ ರಾಜ್ಯ ಮಟ್ಟದ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ದತ್ತ ಪೀಠ ವಿಚಾರದಲ್ಲಿ ನಮ್ಮ ಸರ್ಕಾರ ಮತ್ತು ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಅನುಗುಣವಾಗಿ ಸಂಪುಟ ಉಪ ಸಮಿತಿಯ ನಿರ್ಣಯದ ಶಿಫಾರಸು ಅಂಗೀಕರಿಸಿದ್ದೇವೆ. ಅದರಂತೆ ವ್ಯವಸ್ಥಾಪನಾ ಸಮಿತಿಯನ್ನು ಸರ್ಕಾರ ನೇಮಕ ಮಾಡಿದೆ. ಅರ್ಚಕರ ನೇಮಕಕ್ಕೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ನಾಲ್ಕು ದಶಕಗಳ ಹೋರಾಟದ ಈಡೇರಿದ ಹಿನ್ನೆಲೆಯಲ್ಲಿ ಈ ಬಾರಿ ವೈಭವದ ದತ್ತ ಜಯಂತಿ ಆಚರಿಸುತ್ತೇವೆ ಎಂದರು.

ಕಾಂಗ್ರೆಸ್‌’ನ ಅಳಿದುಳಿದ ಪಳೆಯುಳಿಕೆ 2024ರ ವೇಳೆಗೆ ನಶಿಸಿಹೋಗಲಿದೆ. ಕಾಂಗ್ರೆಸ್‌ನವರದ್ದು ರಾಜಕೀಯ ನಿಮಿತ್ತಂ ಬಹುಕೃತ ವೇಷಂ. ಇವತ್ತಿನ ರಾಹುಲ್ ಗಾಂಧಿ ವೇಷ ಅದರಲ್ಲಿ ಒಂದು. ರಾಹುಲ್ ಗಾಂಧಿಯವರ ಈ ವೇಷ ನೋಡಿ ಸಿದ್ದರಾಮಯ್ಯ ಅವರಿಗೆ ಏನು ಅನಿಸುತ್ತದೆ ಎಂದು ಹೇಳಲಿ. ಊಸರವಳ್ಳಿಯಂತೆ ‌ಬಣ್ಣ ಬದಲಾಯಿಸುವವರ ಬಗ್ಗೆ ಏನು ಅನಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಲಿ ಎಂದರು.

ಮೋದಿ ಭ್ರಷ್ಟರ ಪಾಲಿಗೆ ಭಸ್ಮಾಸುರ

`ಮೋದಿ ಆಧುನಿಕ‌ ಭಸ್ಮಾಸುರ’ ಎಂಬ ಕಾಂಗ್ರೆಸ್ ಟೀಕೆ ವಿಚಾರ, ಹೌದು ಭ್ರಷ್ಟರ, ಕೆಟ್ಟವರ ಪಾಲಿಗೆ ಮೋದಿ ಭಸ್ಮಾಸುರ. ಶ್ರೀಮನ್ನಾರಾಯಣನಂತೆ ಮೋದಿಯವರು ರಕ್ಷಕ. ಜನರ ಪಾಲಿಗೆ ಮೋದಿ ಕಾಮಧೇನು ಎಂದರು.

ನಾನು ಡಿಕೆಶಿಗೆ ರೌಡಿ, ಮಾಜಿ ರೌಡಿ ಎಂದು ಕರೆಯಲ್ಲ

ನಮ್ಮದು ರಾಷ್ಟ್ರೀಯ ಪಕ್ಷ. ಪ್ರವಾಹದ ಜತೆಗೆ ನೀರೂ ಬರುತ್ತದೆ. ಕೆಸರು, ಕಸಕಡ್ಡಿ ಬರುತ್ತದೆ. ಮುಂದೆ ಎಲ್ಲವನ್ನೂ ಫಿಲ್ಟರ್ ಮಾಡುತ್ತೇವೆ. ನಮ್ಮ ನೀತಿ, ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗುತ್ತದೆ. ನಾವು ಡಿ.ಕೆ. ಶಿವಕುಮಾರ್‌ ಅವರನ್ನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆದಿಲ್ಲ. ಹಾಗಂತ ಕರೆದಿದ್ದು, ‘ಆ ದಿನಗಳು’ ಚಿತ್ರದ ಅಗ್ನಿಶ್ರೀಧರ್. ನಾನು ಡಿಕೆಶಿಗೆ ರೌಡಿ, ಮಾಜಿ ರೌಡಿ ಎಂದು ಕರೆಯಲ್ಲ ಎಂದರು.