ಮನೆ ಯೋಗಾಸನ ಸಂಧಿವಾತದ ನೋವು ನಿವಾರಣೆ ಮಾಡುವ ಯೋಗಾಸನಗಳು

ಸಂಧಿವಾತದ ನೋವು ನಿವಾರಣೆ ಮಾಡುವ ಯೋಗಾಸನಗಳು

0

ಯೋಗಭ್ಯಾಸ ಮಾಡಿದರೆ ಕಾಯಿಲೆಗಳು ಬರುವುದಿಲ್ಲ ಎಂದು ಕೇಳಿದ್ದೇವೆ. ದೈಹಿಕವಾಗಿ ಬರಬಹುದಾದ ಕಾಯಿಲೆಗಳು ಮತ್ತು ಮೂಳೆಗಳಿಗೆ ಸಂಬಂಧಪಟ್ಟ ಕಾಯಿಲೆಗಳು ಸಹ ಪರಿಹಾರ ಕಾಣುತ್ತವೆ. ಸಾಕಷ್ಟು ಜನರಿಗೆ ಇಂದು ಎಷ್ಟೇ ಟ್ರೈ ಮಾಡಿದರೂ ಕೀಲು ನೋವು ಅಥವಾ ಆರ್ಥ್ರೈಟಿಸ್ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಇಂದು ಕೆಲಸಕ್ಕೆ ಹೋಗುವವರು ಕೂಡ ಈ ಸಮಸ್ಯೆಗೆ ಗುರಿಯಾಗಿ ವಿಪರೀತ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಬೆಳಗಿನ ಸಮಯದಲ್ಲಿ ಯೋಗಭ್ಯಾಸಕ್ಕೆ ಸಮಯವನ್ನು ಮೀಸಲಿಟ್ಟರೆ ಇಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಪಶ್ಚಿಮೋತ್ತನಾಸನ

• ಮೊದಲನೆಯದಾಗಿ ನೀವು ಒಂದು ಯೋಗ ಚಾಪೆಯ ಮೇಲೆ ನೇರವಾಗಿ ಕುಳಿತುಕೊಂಡು ಕಾಲುಗಳನ್ನು ನಿಮ್ಮ ಮುಂಭಾಗಕ್ಕೆ ಚಾಚಿ. ಆನಂತರ ನಿಮ್ಮ ಕೈಗಳನ್ನು ನಿಮ್ಮ ತಲೆಯ ಮೇಲೆ ಎತ್ತಿ ವಿಸ್ತರಿಸಿ ಅದೇ ಸಮಯದಲ್ಲಿ ಉಸಿರನ್ನು ಒಳಗೆ ತೆಗೆದುಕೊಳ್ಳಿ.

• ನಿಧಾನವಾಗಿ ಮುಂದಕ್ಕೆ ಬಾಗುತ್ತಾ ನಿಮ್ಮ ಹೆಬ್ಬೆರಳುಗಳ ಮಧ್ಯೆ ನಿಮ್ಮ ತಲೆಯನ್ನು ತರುವ ಪ್ರಯತ್ನ ಮಾಡುತ್ತಾ ನೀವು ತೆಗೆದುಕೊಂಡ ಉಸಿರನ್ನು ನಿಧಾನವಾಗಿ ಹೊರಬಿಡಿ. ನಿಧಾನವಾಗಿ ನಿಮ್ಮ ಮಂಡಿಗಳ ಕಡೆಗೆ ತಲೆಯನ್ನು ತನ್ನಿ.

• ನಿಮ್ಮ ಬೆನ್ನಿನ ಭಾಗವನ್ನು ಮುಂಭಾಗಕ್ಕೆ ಬರುವಂತೆ ಬಾಗಿ ಸಾಧ್ಯವಾದಷ್ಟು ನಿಮ್ಮ ಕಾಲುಗಳು, ನಿಮ್ಮ ತೋಳುಗಳು ನಿಮ್ಮ ಮುಂದಿರುವಂತೆ ನೋಡಿಕೊಳ್ಳಿ. ತೆಗೆದುಕೊಂಡ ಉಸಿರನ್ನು ಹೊರಗೆ ಬಿಡುತ್ತಾ ಮತ್ತೆ ನಿಮ್ಮ ಮೊದಲಿನ ಸ್ಥಿತಿಗೆ ಬಂದು ನಿಮ್ಮ ಎರಡು ಕೈಗಳನ್ನು ಕೆಳಗೆ ತನ್ನಿ.

ವೀರಭದ್ರಾಸನ

• ಇದನ್ನು ಮಾಡಲು ಮೊದಲು ನೇರವಾಗಿ ನಿಂತುಕೊಂಡು ನಿಮ್ಮ ಎರಡು ಕಾಲುಗಳನ್ನು ಅತ್ತಿತ್ತ ಇಡಿ. ನಿಮ್ಮ ಬಲಬದಿಯ ಕಾಲನ್ನು 90 ಡಿಗ್ರಿಗಳ ತನಕ ತಿರುಗಿಸಿ ಎಡಗಡೆ ಕಾಲನ್ನು 15 ಡಿಗ್ರಿಗಳು ತಿರುಗಿಸಿ. ನಿಮ್ಮ ಎರಡು ಕೈಗಳನ್ನು ನಿಮ್ಮ ಭುಜದ ನೇರಕ್ಕೆ ಬರುವಂತೆ ಅಕ್ಕ ಪಕ್ಕ ಮೇಲತ್ತಿ.

• ಈ ಸಂದರ್ಭದಲ್ಲಿ ನಿಮ್ಮ ಅಂಗೈ ಮೇಲೆ ನೋಡುವಂತೆ ಇಟ್ಟುಕೊಳ್ಳಿ. ಈಗ ನಿಮ್ಮ ಮಂಡಿಯನ್ನು ಮಡಚಿ ನಿಮ್ಮ ತಲೆಯನ್ನು ಬಲಗಡೆಗೆ ತಿರುಗಿಸಿ. ಇದೇ ಪೊಸಿಷನ್ ನಲ್ಲಿ ಇದ್ದು, ನಿಮ್ಮ ಕೈಗಳನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನ ಪಡಿ. ಕೊನೆಯದಾಗಿ ಈಗ ನಿಮ್ಮ ಕೈಗಳನ್ನು ಕೆಳಗೆ ತಂದು ಮತ್ತೆ ಸಹಜ ಸ್ಥಿತಿಗೆ ಬನ್ನಿ.

ಚಕ್ರವಾಕಾಸನ

• ಇದನ್ನು ಶುರು ಮಾಡಲು ಮೊದಲು ನೀವು ಹಸುವಿನ ಭಂಗಿಯಲ್ಲಿ ಯೋಗ ಚಾಪೆಯ ಮೇಲೆ ನಿಂತುಕೊಳ್ಳಲು ಟ್ರೈ ಮಾಡಿ. ಈಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ನಿಮ್ಮ ಹೊಟ್ಟೆಯ ಭಾಗವನ್ನು ಯೋಗ ಚಾಪೆಯ ಕಡೆಗೆ ತನ್ನಿ.

• ನಿಮ್ಮ ಎದೆ, ಗಲ್ಲವನ್ನು ಮತ್ತು ನಿಮ್ಮ ದೇಹವನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಲು ಟ್ರೈ ಮಾಡಿ. ನಿಮ್ಮ ಕಿವಿಗಳಿಂದ ನಿಮ್ಮ ಭುಜಗಳನ್ನು ದೂರ ಇರಿಸಿ. ಈಗ ಉಸಿರನ್ನು ಹೊರಗೆ ಬಿಡುತ್ತಾ ಬೆಕ್ಕಿನ ಭಂಗಿಗೆ ಬನ್ನಿ. ಅಂದರೆ ನಿಮ್ಮ ಹೊಟ್ಟೆಯನ್ನು ನಿಧಾನವಾಗಿ ಮೇಲೆತ್ತಿ ನೀವು ಗುಂಡಗಿನ ಆಕಾರದಲ್ಲಿ ಇರುವ ಹಾಗೆ ನೋಡಿಕೊಳ್ಳಿ. ಈಗ ಉಸಿರನ್ನು ಒಳಗೆ ತೆಗೆದುಕೊಂಡು ನಿಧಾನವಾಗಿ ಹಸುವಿನ ಭಂಗಿಯ ಆಕಾರಕ್ಕೆ ಬನ್ನಿ.

ತ್ರಿಕೋಣಾಸನ

• ನಿಮ್ಮ ಎರಡು ಕಾಲುಗಳನ್ನು ಅಕ್ಕ ಪಕ್ಕ ಇಟ್ಟು ನೇರವಾಗಿ ನಿಂತುಕೊಳ್ಳಿ. ಈಗ ಉಸಿರನ್ನು ಒಳಗೆ ತೆಗೆದುಕೊಂಡು ಉಸಿರನ್ನು ನಿಧಾನವಾಗಿ ಹೊರಗೆ ಬಿಡುತ್ತಾ ನಿಮ್ಮ ದೇಹವನ್ನು ಬಲಬದಿಗೆ ಬಾಗಿಸಿ ನಿಮ್ಮ ಬಲಗೈಯನ್ನು ನಿಮ್ಮ ತಲೆಯ ಮೇಲೆತ್ತಿ.

• ಈ ಸಂದರ್ಭದಲ್ಲಿ ನಿಮ್ಮ ಬಲಗೈ ನಿಮ್ಮ ಬಲಗಡೆಯ ಕಿವಿಯ ಕಡೆಗೆ ನೇರವಾಗಿ ಇರಲಿ. ನಿಮ್ಮ ಎಡಗೈ ನೆಲದ ಮೇಲಿದ್ದು, ಬಲಗೈ ನಿಮ್ಮ ಮನೆಯ ಸೀಲಿಂಗ್ ಕಡೆಗೆ ಚಾಚಿ ಇರಿಸಿಕೊಳ್ಳಿ. ಈ ಸಂದರ್ಭದಲ್ಲಿ ನಿಮ್ಮ ದೇಹ ಪಕ್ಕಕ್ಕೆ ಬಾಗಿರಲಿ. ಹಿಂದೆ ಅಥವಾ ಮುಂದೆ ಅಲ್ಲ. ನಿಧಾನವಾಗಿ ನೀವು ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾ ಮತ್ತೆ ಮೊದಲಿನ ಸಹಜ ಸ್ಥಿತಿಗೆ ಬನ್ನಿ. ಇದೇ ರೀತಿ ಇನ್ನೊಂದು ಬದಿಯಲ್ಲಿ ಕೂಡ ಮಾಡಿ.

ವೃಕ್ಷಾಸನ

• ಈ ಯೋಗಾಸನ ಮಾಡಲು ನಿಮ್ಮ ಎರಡು ಕೈಗಳನ್ನು ಅಕ್ಕಪಕ್ಕ ಇಟ್ಟುಕೊಂಡು ನೇರವಾಗಿ ನಿಂತುಕೊಳ್ಳಿ. ನಿಮ್ಮ ಬಲ ಮಂಡಿಯನ್ನು ಮಡಚಿ ನಿಮ್ಮ ಬಲ ಪಾದವನ್ನು ನಿಮ್ಮ ಎಡ ಬದಿಯ ತೊಡೆಯ ಮೇಲೆ ಇಟ್ಟುಕೊಳ್ಳಿ.

• ಇಲ್ಲಿ ನೀವು ಸಮತೋಲನ ಕಾಯ್ದುಕೊಂಡ ನಂತರದಲ್ಲಿ ನಿಧಾನವಾಗಿ ಉಸಿರಿನ ಒಳಗೆ ತೆಗೆದುಕೊಳ್ಳುತ್ತಾ ನಿಮ್ಮ ಎರಡು ಕೈಗಳನ್ನು ತಲೆಯ ಮೇಲೆತ್ತಿ ನಮಸ್ಕಾರದ ಭಂಗಿಯಲ್ಲಿ ಇಟ್ಟುಕೊಳ್ಳಿ.

• ಈಗ ಮುಂಭಾಗಕ್ಕೆ ನೋಡುತ್ತಾ ನಿಮ್ಮ ಬೆನ್ನು ಹುರಿಯನ್ನು ನೇರವಾಗಿ ಇಟ್ಟುಕೊಳ್ಳಲು ಟ್ರೈ ಮಾಡಿ. ನಿಧಾನವಾಗಿ ತೆಗೆದುಕೊಂಡ ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಎರಡು ಕೈಗಳನ್ನು ಮತ್ತೆ ಸಹಜ ಸ್ಥಿತಿಗೆ ನಿಮ್ಮ ದೇಹದ ಅಕ್ಕಪಕ್ಕ ತನ್ನಿ. ನಿಮ್ಮ ಕಾಲುಗಳನ್ನು ಸಹ ಮೊದಲಿನ ಸ್ಥಿತಿಗೆ ತನ್ನಿ.