ಬೆಂಗಳೂರು(Bengaluru): ಮಚ್ಚು- ಲಾಂಗ್ ತೋರಿಸಿ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಯನ್ನು ಬಂಧಿಸಿರುವ ಡಿ.ಜೆ.ಹಳ್ಳಿ ಪೊಲೀಸರು, ಆತನ ಕೈಗೆ ಕೋಳ ಹಾಕಿ ಠಾಣೆ ವ್ಯಾಪ್ತಿಯಲ್ಲಿ ಮೆರವಣಿಗೆ ಮಾಡಿ ಜನರಲ್ಲಿ ಧೈರ್ಯ ತುಂಬಿದರು.
ಸ್ಥಳೀಯ ನಿವಾಸಿ ಸುಹೇಲ್ ಅಲಿಯಾಸ್ ಪಪ್ಪಾಯಿ ಬಂಧಿತ ರೌಡಿ.
ಅಪರಾಧ ಹಿನ್ನೆಲೆಯುಳ್ಳ ಸುಹೇಲ್, ತನ್ನದೇ ತಂಡ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ. ಡಿ.ಜೆ. ಹಳ್ಳಿಯ ಹಲವು ಅಂಗಡಿ- ಮಳಿಗೆಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಹಣ ನೀಡದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ರೌಡಿ ವರ್ತನೆಯಿಂದ ಜನರೆಲ್ಲ ಬೇಸತ್ತು, ಭಯದಲ್ಲಿ ಬದುಕುತ್ತಿದ್ದರು. ಇತ್ತೀಚಿಗೆ ನಡೆದಿದ್ದ ಅಪರಾಧ ಪ್ರಕರಣದಲ್ಲಿ ಸುಹೇಲ್’ನನ್ನು ಬಂಧಿಸಲಾಯಿತು ಎಂದು ತಿಳಿಸಿವೆ.
ಆರೋಪಿ ನೋಡಿದರೆ ಜನರು ಭಯಪಡುತ್ತಿದ್ದರು. ಅವರಲ್ಲಿ ಧೈರ್ಯ ಮೂಡಿಸುವುದಕ್ಕಾಗಿ, ರೌಡಿಗೆ ಕೈ ಕೋಳ ಹಾಕಿ ರಸ್ತೆಯಲ್ಲಿ ಕರೆದೊಯ್ಯಲಾಯಿತು. ಜನರಿಗೆ ಕೈ ಮುಗಿಸಿ, ಇನ್ನೊಮ್ಮೆ ಇಂಥ ಕೃತ್ಯ ಮಾಡುವುದಿಲ್ಲವೆಂದು ಹೇಳಿಸಲಾಯಿತು. ನಿಮ್ಮ ಜೊತೆ ಪೊಲೀಸರು ಇದ್ದಾರೆ. ಪುಡಿ ರೌಡಿಗಳಿಗೆಲ್ಲ ಹೆದರಬೇಡಿ ಎಂದು ಜನರಿಗೆ ಧೈರ್ಯ ತುಂಬಲಾಯಿತು ಎಂದೂ ಮೂಲಗಳು ತಿಳಿಸಿವೆ.