Saval TV on YouTube
ಬೆಂಗಳೂರು(Bengaluru): ಮಾಂಡೂಸ್ ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿ.10ರಿಂದ ಮೂರು ದಿನ ಮೋಡ ಮುಸುಕಿದ ವಾತಾವರಣ ಇರಲಿದ್ದು ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಶನಿವಾರ ಸಾಧಾರಣ ಮಳೆ ಸುರಿಯಲಿದ್ದು ಈ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಕೋಲಾರ, ಮೈಸೂರು, ತುಮಕೂರು, ಬಾಗಲಕೋಟೆ, ರಾಯಚೂರು, ವಿಜಯಪುರ ಹಾಗೂ ಯಾದಗಿರಿಯಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಣಾಮ ಬೆಂಗಳೂರು, ಹಾಸನ, ಕೊಡಗಿನ ಅಲ್ಲಲ್ಲಿ ಶುಕ್ರವಾರ ತುಂತುರು ಮಳೆ ಸುರಿದಿದೆ. ಮೈಕೊರೆಯುವ ಚಳಿಯಿದೆ.
ಮಲೆನಾಡು ಜಿಲ್ಲೆಗಳಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು, ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಕೊಯ್ಲು ಮಾಡಿದ ಕಾಫಿ ಒಣಗಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಭತ್ತದ ಕಟಾವಿಗೂ ವಾತಾವರಣ ಅಡ್ಡಿಯಾಗಿದೆ.