ಸ್ಯಾಂಡಲ್’ವುಡ್ ನಟ ಡಾಲಿ ಧನಂಜಯ ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಡಿಸೆಂಬರ್ 30ರಂದು ಚಿತ್ರ ತೆರೆ ಕಾಣಲಿದೆ.
ಈ ಚಿತ್ರದಲ್ಲಿ ಧನಂಜಯ ಅವರ ಜತೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಟೀಸರ್’ನಲ್ಲಿ ಧನಂಜಯ ಅವರ ಲುಕ್ ಮತ್ತು ಸಿನಿಮಾದ ಮೇಕಿಂಗ್ ಗಮನ ಸೆಳೆಯುತ್ತಿದೆ. ಧನಂಜಯ ಈ ಚಿತ್ರದಲ್ಲಿ ಬಾರ್ ಸಪ್ಲೈಯರ್ ಆಗಿ ನಟಿಸಿದ್ದಾರೆ.
ನಟ ಧನಂಜಯ ಚಿತ್ರದ ಕುರಿತು ಮಾತನಾಡಿ, ಜಮಾಲಿ ಗುಡ್ಡ ಎಂಬುದು ನಮ್ಮ ನಿರ್ದೇಶಕರ ಕಲ್ಪನೆಯ ಪ್ರದೇಶ. ಸಿಂಪಲ್ ಆಗಿರುವ ವಿಷಯವನ್ನು ಸರಳವಾಗಿ ಮತ್ತು ಭಾವನಾತ್ಮಕವಾಗಿ ಹೇಳುತ್ತಾ ಹೋಗುವಂತಹ ಕಥೆ ಈ ಚಿತ್ರದಲ್ಲಿದೆ. ಹಾಗಾಗಿ ಇದನ್ನು ಸಿಂಪಲ್ ಎಮೋಶನಲ್ ಜರ್ನಿ ಎಂದು ಕರೆಯುತ್ತೇವೆ. ಸಿನಿಮಾ 90ರ ದಶಕದಲ್ಲಿ ನಡೆಯಲಿದ್ದು, ಆ ಕಾಲಘಟ್ಟವನ್ನು ಬಹಳ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಮೇಕಿಂಗ್ ವಿಚಾರದಲ್ಲಿ ನಮ್ಮ ನಿರ್ಮಾಪಕ ಶ್ರೀಹರಿಯವರು ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ. ಸಿನಿಮಾಗೆ ಏನು ಬೇಕೋ ಅದನ್ನು ನೀಡಿ ಚಿತ್ರವನ್ನು ಬಹಳ ಚೆಂದವಾಗಿ ತೆರೆಮೇಲೆ ಬರುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
‘ಜಮಾಲಿ ಗುಡ್ಡ’ ಸಿನಿಮಾದಲ್ಲಿ ಧನಂಜಯ ಅವರ ಜತೆ ಹಲವು ಕಲಾವಿದರು ನಟಿಸಿದ್ದಾರೆ. ಯಶ್ ಶೆಟ್ಟಿ, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ, ಮಯೂರಿ, ಕಾನ್ಸ್ಟೇಬಲ್ ಸರೋಜ ಖ್ಯಾತಿಯ ತ್ರಿವೇಣಿ, ಬೇಬಿ ಪ್ರಾಣ್ಯ, ನಂದ ಗೋಪಾಲ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ಸಿನಿಮಾವನ್ನು ಬೆಂಗಳೂರಿನ ಎಚ್’ಎಂಟಿಯಲ್ಲಿ ಭರ್ಜರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಅದನ್ನು ಬಿಟ್ಟರೆ ಗೋಕರ್ಣ, ಚಿಕ್ಕಮಗಳೂರು ಸೇರಿದಂತೆ ಪ್ರಕೃತಿಯ ಮಡಿಲಲ್ಲಿಸಿನಿಮಾವನ್ನು ಸೆರೆ ಹಿಡಿಯಲಾಗಿದೆ.
ವಿಂಟೇಜ್ ಸ್ಟೈಲ್’ನಲ್ಲಿನ ಕಾರು, ಒಂದು ಸೇತುವೆ ಸೇರಿದಂತೆ ಹಲವು ಸೆಟ್’ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗಿದೆ. ಧನಂಜಯ ಅವರ ಲುಕ್ನಂತೆ ನಟ ಯಶ್ ಶೆಟ್ಟಿ , ಅದಿತಿ ಪ್ರಭುದೇವ.. ಹೀಗೆ ಎಲ್ಲಾ ಕಲಾವಿದರಿಗೂ ನಿರ್ದೇಶಕರು ಹೊಸ ರೀತಿಯ ಲುಕ್ ನೀಡಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ಒಂದಷ್ಟು ನಿರೀಕ್ಷೆ ಇದೆ.
ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್ ಎಸ್. ಅವರು ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಂಕಲನದ ಜವಾಬ್ದಾರಿ ಹರೀಶ್ ಕೊಮ್ಮೆಯವರದ್ದಾಗಿದೆ.