ಮನೆ ಪೌರಾಣಿಕ ಪ್ರಭಾಸ ಕ್ಷೇತ್ರ ಮಹಾತ್ಮೆ

ಪ್ರಭಾಸ ಕ್ಷೇತ್ರ ಮಹಾತ್ಮೆ

0

ಪ್ರಭಾಸಕ್ಷೇತ್ರ ಮಹಾತ್ಮೆಯ ಈ ಕಥೆಯು ವ್ಯಾಸ ಮಹಾಭಾರತದ ಶಲ್ಯಪರ್ವದ ಸಾರಸ್ವತಪರ್ವ (ಅಧ್ಯಾಯ ೩೪) ದಲ್ಲಿ ಬರುತ್ತದೆ. ಬಲರಾಮನ ತೀರ್ಥಯಾತ್ರೆಯ ಕುರಿತು ಜನಮೇಜನು ಕೇಳಲು ವೈಶಂಪಾಯನನು ಈ ಕಥೆಯನ್ನು ಹೇಳಿದನು.

ದಕ್ಷನಿಗೆ ಅನೇಕ ಕನ್ಯೆಯರಿದ್ದರು. ಅವರಲ್ಲಿ ಇಪ್ಪತ್ತೇಳು ಕನ್ಯೆಯರನ್ನು ದಕ್ಷನು ಸೋಮನಿಗೆ ಕೊಟ್ಟನು. ಗಣನೆಯ ಸಲುವಾಗಿ ಸೋಮನ ಆ ಶುಭಲಕ್ಷಣ ಪತ್ನಿಯರು ನಕ್ಷತ್ರಯೋಗನಿರತರಾಗಿದ್ದರು. ಆ ವಿಶಾಲಾಕ್ಷಿಯರೆಲ್ಲರೂ ಭುವಿಯಲ್ಲಿಯೇ ಅಪ್ರತಿಮ ರೂಪವುಳ್ಳವರಾಗಿದ್ದರು. ಅವರೆಲ್ಲರಲ್ಲಿ ರೋಹಿಣಿಯು ಅತ್ಯಂತ ರೂಪಸಂಪದೆಯಾಗಿದ್ದಳು. ಆದುದರಿಂದ ಭಗವಾನ್ ನಿಶಾಕರನು ಅವಳಲ್ಲಿಯೇ ಹೆಚ್ಚು ಪ್ರೀತಿಯನ್ನಿಟ್ಟಿದ್ದನು. ಅವಳೂ ಕೂಡ ಅವನ ಹೃದಯ ವಲ್ಲಭೆಯಾಗಿದ್ದಳು. ಅವನು ಸದಾ ಅವಳೊಂದಿಯೇ ಭೋಗಿಸುತ್ತಿದ್ದನು. ಮೊದಲಿನಿಂದಲೂ ಸೋಮನು ರೋಹಿಣಿಯಲ್ಲಿಯೇ ವಾಸಿಸುತ್ತಿದ್ದನು. ಇದರಿಂದ ನಕ್ಷತ್ರಗಳು ಆ ಮಹಾತ್ಮನ ಮೇಲೆ ಕುಪಿತರಾದರು. ಆ ಅತಂದ್ರಿತರು ತಂದೆ ಪ್ರಜಾಪತಿಯಲ್ಲಿಗೆ ಹೋಗಿ ಹೇಳಿದರು: “ಸೋಮನು ನಮ್ಮಲ್ಲಿ ವಾಸಿಸುವುದೇ ಇಲ್ಲ. ಸದಾ ರೋಹಿಣಿಯನ್ನೇ ಪ್ರೀತಿಸುತ್ತಾನೆ. ನಾವೆಲ್ಲರೂ ನಿನ್ನ ಬಳಿಯಲ್ಲಿಯೇ ಒಟ್ಟಿಗೇ ಇದ್ದುಬಿಡುತ್ತೇವೆ. ನಿನ್ನ ಚರಣತತ್ಪರರಾಗಿ ನಿಯತಾಹಾರದಿಂದ ತಪಸ್ಸನ್ನು ಮಾಡುತ್ತಾ ವಾಸಿಸುತ್ತೇವೆ.”

ಅವರ ಆ ಮಾತನ್ನು ಕೇಳಿದ ದಕ್ಷನು ಸೋಮನಿಗೆ ಹೇಳಿದನು: “ಭಾರ್ಯೆಯರಲ್ಲಿ ಸಮನಾಗಿ ವರ್ತಿಸು. ಇಲ್ಲದಿದ್ದರೆ ಮಹಾ ಅಧರ್ಮವು ತಾಗೀತು!”

ಅವರೆಲ್ಲರಿಗೂ ದಕ್ಷನು ಹೇಳಿದನು: “ಸೋಮನ ಬಳಿ ಹೋಗಿ. ನನ್ನ ಶಾಸನದಂತೆ ಅವನು ಎಲ್ಲರಲ್ಲಿಯೂ ಸಮನಾಗಿ ವರ್ತಿಸುತ್ತಾನೆ.”

ಬೀಳ್ಕೊಡಲ್ಪಟ್ಟ ಅವರು ನಂತರ ಶೀತಾಂಶುವಿನ ಭವನಕ್ಕೆ ತೆರಳಿದರು. ಆದರೂ ಕೂಡ ಭಗವಾನ್ ಸೋಮನು ಮೊದಲಿನಂತೆ ರೋಹಿಣಿಯೊಡನೆಯೇ ವಾಸಿಸುತ್ತಿದ್ದನು ಮತ್ತು ಪುನಃ ಪುನಃ ಅವಳನ್ನೇ ಪ್ರೀತಿಸುತ್ತಿದ್ದನು. ಆಗ ಅವರೆಲ್ಲರೂ ಒಟ್ಟಿಗೇ ಪುನಃ ತಂದೆಯಲ್ಲಿ ಹೇಳಿಕೊಂಡರು: “ನಿನ್ನ ಶುಶ್ರೂಷಣೆಯಲ್ಲಿ ನಿನ್ನ ಆಶ್ರಮದಲ್ಲಿಯೇ ವಾಸಿಸುತ್ತೇವೆ. ಸೋಮನು ನಮ್ಮೊಡನೆ ವಾಸಿಸುತ್ತಿಲ್ಲ. ನಿನ್ನ ವಚನದಂತೆ ಅವನು ಮಾಡುತ್ತಿಲ್ಲ.” ಅವರ ಆ ಮಾತನ್ನು ಕೇಳಿ ದಕ್ಷನು ಸೋಮನಿಗೆ ಹೇಳಿದನು: “ವಿರೋಚನ! ಭಾರ್ಯೆಯರಲ್ಲಿ ಸಮವಾಗಿ ವರ್ತಿಸು. ಇಲ್ಲವಾದರೆ ನಾನು ನಿನ್ನನ್ನು ಶಪಿಸುತ್ತೇನೆ.”

ದಕ್ಷನ ಆ ಮಾತನ್ನು ಅನಾದರಿಸಿ ಭಗವಾನ್ ಶಶಿಯು ರೋಹಿಣಿಯ ಜೊತೆಯಲ್ಲಿಯೇ ವಾಸಿಸುತ್ತಿದ್ದನು. ಇದರಿಂದ ಅವರು ಪುನಃ ಕುಪಿತರಾದರು. ತಂದೆಯಲ್ಲಿಗೆ ಹೋಗಿ ಶಿರಬಾಗಿ ನಮಸ್ಕರಿಸಿ ಹೇಳಿದರು: “ಸೋಮನು ನಮ್ಮೊಡನೆ ವಾಸಿಸುತ್ತಿಲ್ಲ. ಆದುದರಿಂದ ನಮಗೆ ನೀನೇ ಶರಣು. ಚಂದ್ರಮನು ಸದಾ ರೋಹಿಣಿಯಲ್ಲಿಯೇ ವಾಸಿಸುತ್ತಾನೆ. ಸೋಮನು ನಮ್ಮನ್ನು ಸ್ವೀಕರಿಸುವಂತೆ ಮಾಡಿ ನೀನೇ ನಮ್ಮೆಲ್ಲರನ್ನೂ ಕಾಪಾಡಬೇಕು.”

ಅದನ್ನು ಕೇಳಿ ಭಗವಾನನು ಕ್ರುದ್ಧನಾಗಿ ರೋಷದಿಂದ ಯಕ್ಷ್ಮ ರೋಗವನ್ನು ಸೃಷ್ಟಿಸಿದನು. ಅದು ಉಡುಪತಿ ಚಂದ್ರನನ್ನು ಪ್ರವೇಶಿಸಿತು. ಯಕ್ಷ್ಮದಿಂದ ಪೀಡಿತನಾದ ಶಶಿಯು ದಿನದಿನವೂ ಕ್ಷೀಣಿಸಿದನು. ಯಕ್ಷ್ಮದಿಂದ ಮುಕ್ತಿಯನ್ನು ಪಡೆಯಲು ಪ್ರಯತ್ನವನ್ನೂ ಮಾಡಿದನು. ನಿಶಾಕರನು ವಿವಿಧ ಯಜ್ಞ-ಯಾಗಾದಿಗಳನ್ನೂ ಮಾಡಿದನು. ಆದರೂ ಆ ಶಾಪದಿಂದ ವಿಮೋಚನೆಹೊಂದದೇ ಕ್ಷಯವಾಗುತ್ತಾ ಹೋದನು. ಸೋಮನು ಕ್ಷೀಣನಾಗುತ್ತಿರಲು ಔಷಧಿಗಳೂ ಬೆಳೆಯಲಿಲ್ಲ. ಎಲ್ಲೆಡೆ ಎಲ್ಲ ಔಷಧಿಗಳಲ್ಲಿನ ಋಚಿ-ರಸ-ಶಕ್ತಿಗಳು ಉಡುಗಿಹೋದವು. ನಿಶಾಕರನು ಕ್ಷೀಣಿಸುತ್ತಿರಲು ಔಷಧಿಗಳ ಕ್ಷಯಯೂ ಉಂಟಾಗಲು ಪ್ರಾಣಿಗಳೂ ಸರ್ವ ಪ್ರಜೆಗಳೂ ಕೃಶರಾಗಿ ನಾಶವಾಗತೊಡಗಿದವು. ಆಗ ದೇವತೆಗಳು ಒಟ್ಟಾಗಿ ಸೋಮನಿಗೆ ಹೇಳಿದರು: “ನಿನ್ನ ರೂಪವು ಹೀಗೇಕಾಯಿತು? ಪ್ರಕಾಶಿಸುತ್ತಿಲ್ಲವಲ್ಲ? ನಮಗೆ ಇದರ ಕಾರಣವೆಲ್ಲವನ್ನೂ ಈ ಮಹಾ ಭಯವು ಎಲ್ಲಿಂದ ಉಂಟಾಯಿತೆನ್ನುವುದನ್ನೂ ಹೇಳು. ನಿನ್ನ ಮಾತನ್ನು ಕೇಳಿ ನಾವು ಮಾಡಬೇಕಾದುದನ್ನು ಮಾಡುತ್ತೇವೆ.”

ಅವರ ಮಾತಿಗೆ ಶಶಲಕ್ಷಣನು ಉತ್ತರಿಸಿ ಅವರೆಲ್ಲರಿಗೆ ಶಾಪದ ಕಾರಣವನ್ನೂ ಮತ್ತು ತನಗೆ ಯಕ್ಷ್ಮರೋಗವು ಹೇಗೆ ಬಂದಿತೆನ್ನುವುದನ್ನೂ ಹೇಳಿದನು. ಅವನ ಮಾತನ್ನು ಕೇಳಿ ದೇವತೆಗಳು ದಕ್ಷನಲ್ಲಿಗೆ ಹೋಗಿ ಹೇಳಿದರು: “ಭಗವನ್! ಪ್ರಸನ್ನನಾಗು! ಸೋಮನ ಶಾಪವನ್ನು ಹಿಂದೆತೆಗೆದುಕೋ! ಚಂದ್ರನು ಕ್ಷೀಣನಾಗಿ ಹೋಗಿದ್ದಾನೆ. ಒಂದು ಸ್ವಲ್ಪಮಾತ್ರ ಉಳಿದುಕೊಂಡಿರುವನಂತಿದ್ದಾನೆ. ಅವನ ಕ್ಷಯದಿಂದಾಗಿ ಪ್ರಜೆಗಳೂ ಕೂಡ ಕ್ಷಯಿಸಿ ಹೋಗುತ್ತಿದ್ದಾರೆ. ವಿವಿಧ ಬೇರು-ಔಷಧ-ಬೀಜಗಳು ಮತ್ತು ನಾವು ಕ್ಷಯವಾಗಿ ಹೋಗುತ್ತಿದ್ದೇವೆ. ಆದುದರಿಂದ ಪ್ರಸನ್ನನಾಗಬೇಕು!”

ಹೀಗೆ ಹೇಳಲು ಪ್ರಜಾಪತಿಯು ಯೋಚಿಸಿ ಈ ಮಾತನ್ನಾಡಿದನು: “ನನ್ನ ಮಾತಿನ ಹೊರತಾಗಿ ನಡೆಯುವಂತೆ ಮಾಡಲು ಸಾಧ್ಯವಿಲ್ಲ. ಮಹಾಭಾಗರೇ! ಆದರೆ ಯಾವುದೋ ಒಂದು ಕಾರಣದಿಂದ ಅದು ಪರಿಹಾರಗೊಳ್ಳುತ್ತದೆ. ಶಶಿಯು ನಿತ್ಯವೂ ಸರ್ವ ಭಾರ್ಯೆಯರಲ್ಲಿ ಸಮನಾಗಿ ನಡೆದುಕೊಳ್ಳಲಿ. ಶ್ರೇಷ್ಠ ಸರಸ್ವತೀ ತೀರ್ಥದಲ್ಲಿ ಶಶಲಕ್ಷಣನು ಮುಳುಗಲಿ. ಆಗ ಅವನು ಪುನಃ ವರ್ಧಿಸುತ್ತಾನೆ. ನನ್ನ ಈ ಮಾತು ಸತ್ಯ. ಅರ್ಧಮಾಸ ಸೋಮನು ನಿತ್ಯವೂ ಕ್ಷಯಿಸುತ್ತಾ ಹೋಗುತ್ತಾನೆ. ಮಾಸಾರ್ಧದಲ್ಲಿ ಅವನು ಸದಾ ವೃದ್ಧಿಯನ್ನೂ ಹೊಂದುತ್ತಾನೆ. ನನ್ನ ಈ ಮಾತು ಸತ್ಯ. ಅವನು ಪಶ್ಚಿಮ ಸಮುದ್ರಕ್ಕೆ ಹೋಗಿ ಅಲ್ಲಿ ಸರಸ್ವತೀ ನದಿಯು ಸಮುದ್ರವನ್ನು ಸೇರುವಲ್ಲಿ ದೇವೇಶ ಶಿವನನ್ನು ಆರಾಧಿಸಲಿ. ಆಗ ಅವನು ಕಾಂತಿಯನ್ನು ಹೊಂದುತ್ತಾನೆ.”

ಅನಂತರ ಋಷಿಶಾಸನದಂತೆ ಸೋಮನು ಸರಸ್ವತಿಯ ಪರಮ ತೀರ್ಥವಾದ ಪ್ರಭಾಸಕ್ಕೆ ಹೋದನು. ಆ ಮಹಾದ್ಯುತಿಯು ಅಲ್ಲಿ ಅಮವಾಸ್ಯೆಯಂದು ಮುಳುಗಿ ಮಹಾತೇಜಸ್ಸಿನಿಂದ ಲೋಕಗಳನ್ನು ಬೆಳಗತೊಡಗಿದನು ಮತ್ತು ಶೀತಲಕಿರಣಗಳನ್ನೂ ಪಡೆದನು. ದೇವತೆಗಳೆಲ್ಲರೂ ಪುಷ್ಕಲ ಪ್ರಭೆಗಳನ್ನು ಪಡೆದು ಸೋಮನೊಂದಿಗೆ ದಕ್ಷನ ಎದಿರು ಬಂದರು. ಆಗ ಭಗವಾನ್ ಪ್ರಜಾಪತಿಯು ಸರ್ವ ದೇವತೆಗಳನ್ನೂ ಕಳುಹಿಸಿ, ಪ್ರೀತನಾಗಿ ಸೋಮನಿಗೆ ಇನ್ನೊಮ್ಮೆ ಹೇಳಿದನು: “ಪುತ್ರ! ಸ್ತ್ರೀಯರನ್ನು ಮತ್ತು ವಿಪ್ರರನ್ನು ಎಂದೂ ಅವಮಾನಿಸಬೇಡ! ಸದಾ ಜಾಗರೂಕತೆಯಲ್ಲಿದ್ದುಕೊಂಡು ನನ್ನ ಶಾಸನದಂತೆ ಮಾಡು. ಹೋಗು!” ಬೀಳ್ಕೊಂಡ ಅವನು ತನ್ನ ಭವನಕ್ಕೆ ತೆರಳಿದನು. ಪ್ರಜೆಗಳೂ ಭೋಜನಗಳೂ ಹಿಂದಿನಂತೆ ಮುದಿತಗೊಂಡವು.

ಶ್ರೀಮಾನ್ ಶಶಲಕ್ಷಣನು ನಿತ್ಯವೂ ಅಮಾವಾಸ್ಯೆಯಂದು ಉತ್ತಮ ತೀರ್ಥ ಪ್ರಭಾಸದಲ್ಲಿ ಸ್ನಾನಮಾಡಿ ಪುಷ್ಟನಾಗುತ್ತಾನೆ. ಇದರಲ್ಲಿ ಮುಳುಗಿ ಚಂದ್ರಮನು ಪರಮ ಪ್ರಭೆಯನ್ನು ಪಡೆದುದರಿಂದಲೇ ಇದನ್ನು ಪ್ರಜೆಗಳು ಪ್ರಭಾಸ ಎಂದು ಕರೆಯುತ್ತಾರೆ.