ಮನೆ ರಾಜ್ಯ ಮೈಸೂರು: ಡಿ.17ರಂದು ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

ಮೈಸೂರು: ಡಿ.17ರಂದು ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

0

ಮೈಸೂರು(Mysuru): ರೈತ ವಿರೋಧಿಯಾದ 3 ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲೂ ವಾಪಸ್ ಪಡೆಯಬೇಕು ಎನ್ನುವುದು ಸೇರಿದಂತೆ 17 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯಿಂದ ಡಿ.17ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಟಿ.ರಾಮೇಗೌಡ, ಅಂದು ಬೆಳಿಗ್ಗೆ 11ಕ್ಕೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಾವಿರಾರು ರೈತರು ಗನ್‌ಹೌಸ್ ಬಳಿ ಸೇರಲಿದ್ದಾರೆ. ಅಲ್ಲಿಂದ ಸಂತೆಪೇಟೆ, ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಟನ್‌ ಕಬ್ಬಿಗೆ  4,500 ದರ ನಿಗದಿಪಡಿಸಬೇಕು. ಭತ್ತ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 45 ನಿಗದಿಪಡಿಸಬೇಕು. ವನ್ಯಪ್ರಾಣಿಗಳ ಸಂಘರ್ಷದ ಕಾರಣದಿಂದ ಮೃತರಾದವರ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಬೇಕು. ಆಡು–ಕುರಿ ಸತ್ತರೆ  25ಸಾವಿರ, ಹಸು, ಎಮ್ಮೆ, ಎತ್ತುಗಳಿಗೆ 1 ಲಕ್ಷ ಪರಿಹಾರವನ್ನು ಒದಗಿಸಬೇಕು. ಹಳ್ಳಿಗಳಲ್ಲಿ ಜಲಜೀವನ ಮಿಷನ್‌’ನಲ್ಲಿ ಪ್ರತಿ ಮನೆಗೂ ಮೀಟರ್‌ ಅಳವಡಿಸುವ ನಿರ್ಧಾರವನ್ನು ವಾಪಸ್ ಪಡೆಯಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಬಾರದು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಟಿ.ಶಿವ‍ಪ್ರಸಾದ್, ಮಂಜು ಕಿರಣ್, ಇಮ್ಮಾವು ರಘು, ಕಳ್ಳಿಪುರ ಮಹಾದೇವಸ್ವಾಮಿ, ಕೃಷ್ಣೇಗೌಡ, ಮೋಹನ್ ರಾಯಣ್ಣ ಇದ್ದರು.