ಮನೆ ರಾಜ್ಯ ಗಡಿ ವಿವಾದ ಸಭೆ ಬಳಿಕ ಅವಕಾಶ ಸಿಕ್ಕರೆ ಸಂಪುಟ ವಿಸ್ತರಣೆ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

ಗಡಿ ವಿವಾದ ಸಭೆ ಬಳಿಕ ಅವಕಾಶ ಸಿಕ್ಕರೆ ಸಂಪುಟ ವಿಸ್ತರಣೆ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಗಡಿ ವಿವಾದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿರುವ ಸಭೆಯಲ್ಲಿಪಾಲ್ಗೊಳ್ಳಲು ಇಂದು ದೆಹಲಿಗೆ ತೆರಳುತ್ತಿದ್ದೇನೆ. ಅವಕಾಶ ಸಿಕ್ಕರೆ ಸಚಿವ ಸಂಪುಟ ವಿಸ್ತರಣೆ ಕುರಿತೂ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರದ ಬಗ್ಗೆ ಅಮಿತ್ ಶಾ ಸಭೆ ಕರೆದಿದಾರೆ. ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಅಮಿತ್ ಶಾ ಅವರಿಗೆ ಸ್ಪಷ್ಟಪಡಿಸುತ್ತೇನೆ. ಮಹಾರಾಷ್ಟ್ರ ಆರು ದಶಕಗಳಿಂದ ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ನಾವು ಹಾಗಲ್ಲ, ನಮಗೆ ನಮ್ಮ ನೆಲ ಜಲ ಗಡಿ ವಿಚಾರ ಮುಖ್ಯ, ಎಲ್ಲವನ್ನೂ ಅಮಿತ್ ಶಾ ಅವರಿಗೆ ವಿವರಿಸಲಾಗುತ್ತದೆ ಎಂದರು.

ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡುತ್ತಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ ನಾವು ಹೆಚ್ಚಿನ ಮಹತ್ವ ಕೊಟ್ಟಿದ್ದೇವೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಿದ್ದೇವೆ. ಈ ಬಜೆಟ್​ನಲ್ಲಿ ನಮ್ಮ ಕ್ಲಿನಿಕ್​ಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಸಿಎಂ ಹೇಳಿದರು.

ಎಸ್’​ಸಿ, ಎಸ್​’ಟಿ ಒಳಮೀಸಲಾತಿ ಉಪಸಮಿತಿ ಮಾಡಿರೋದು ಕಣ್ಣೊರೆಸುವ ತಂತ್ರ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ ಆದರೆ ಸಿದ್ದರಾಮಯ್ಯ ಐದು ವರ್ಷ ಅಧಿಕಾರ ನಡೆಸಿದರೂ ವರದಿಯನ್ನು ತಿರುಗಿ ನೋಡಿರಲಿಲ್ಲ. ಇದೇ ಸಮುದಾಯ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದಾಗ ದೀಪ ಹಚ್ಚಿ ಉದ್ಘಾಟನಾ ಭಾಷಣ ಮಾಡಿ ಬಂದವರ ಬಗ್ಗೆ ನಾವು ಮಾತನಾಡಲ್ಲ. ನಮ್ಮ ಬದ್ಧತೆ ಏನು ಅಂತ ಗೊತ್ತಿದೆ. ಇಂತಹ ಪ್ರಮುಖ ವಿಚಾರಗಳಲ್ಲಿ ದಿಟ್ಟತನ ತೆಗೆದುಕೊಂಡಿದ್ದೇವೆ. ನೀವು ಇನ್ನೊಬ್ಬರ ಬಗ್ಗೆ ಮಾತಾಡೋ ಮುಂಚೆ ತಾವು ಯಾವ ರೀತಿ ನಡೆದುಕೊಂಡಿದ್ದಿರಾ ಅಂತಾ ಹಿಂತುರುಗಿ ನೋಡಿದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು.